ಸುಖದ ಹಾದಿ
ಎಚ್ಚೆಸ್ಕೆಯವರ ಮತ್ತೊಂದು ಉತ್ತಮ ಲಲಿತ ಪ್ರಬಂಧದೊಳಗೆ ಒಂದು ಪಕ್ಷಿನೋಟ
ಎಚ್ಚೆಸ್ಕೆಯವರು 1962 ರಲ್ಲಿ ರಚಿಸಿದ ಅನೇಕ ಮಹತ್ವದ ಪ್ರಬಂಧಗಳಲ್ಲಿ ಇದು ಅಗ್ರಪಂಕ್ತಿಯಲ್ಲಿ ಗುರುತಿಸಬಹುದೆಂದರೆ
ಸಂಶಯವಿಲ್ಲ. ಇಲ್ಲಿ ಸುಖ-ಅಸುಖಗಳ ಬಗೆಗೆ ವಿವರಿಸದೇ
ಇರುವ ವಿಷಯವೇ ಇಲ್ಲವೆಂದರೂ ಅತಿಶಯೋಕ್ತಿ ಯಾಗಲಾರದೆಂದೇ ನನ್ನ ಅಭಿಪ್ರಾಯ. ಪ್ರಬಂಧದಲ್ಲಿ
ಸುಖದ ಬಗ್ಗೆ ಎಲ್ಲಾ ಆಯಾಮಗಳನ್ನೂ ಸುಲಲಿತವಾಗಿ, ಸುಂದರ ಪದಜೋಡಣೆಯೊಂದಿಗೆ
ಆ ಕಾಲದಲ್ಲೇ (ಆರು ದಶಕಗಳಿಗಿಂತ ಹಿಂದೆಯೇ) ಪ್ರಸ್ತುತ
ಪಡಿಸಿದ್ದಾರೆ. ನಾನು ಇದನ್ನು ನಮ್ಮ ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘ, ಬೆಂಗಳೂರು
ನಗರ ಶಾಖೆಯ ಗ್ರಂಥಭಂಡಾರದಿಂದ ಒಯ್ದು ಓದಿದ ನೆನಪು. ಆಗ ನಾನು ಓದಿದಾಗ ನನಗೆ
ಆದ ಸುಖದ ಕಲ್ಪನೆಯೇ ಬೇರೆ ಹಾಗೂ ಈಗ ಅದನ್ನೇ ಮತ್ತೊಮ್ಮೆ ಓದಿದಾಗ ಬೇರೆಯದೇ ಆದ ಅರ್ಥವನ್ನು ಪ್ರಬಂಧವು
ನೀಡುವುದು. ಏನೇ ಆಗಲಿ ಪ್ರಬಂಧದಲ್ಲಿನ “ಸುಖದ ಹಾದಿ” ಯ ಅನೇಕ ಮಜಲುಗಳನ್ನು
ಮತ್ತೊಮ್ಮೆ ಓದಿ ಅದರ ಸಾರಾಂಶವನ್ನು ನಿಮ್ಮ ಮುಂದಿಡಲು ನನಗೆ ಅತೀವ ಸಂತಸವಾಗುತ್ತದೆ.
“ನಿಮಗೆ ಸುಖ ಬೇಕೋ? ಹಾಗಿದ್ದರೆ
ಈ ವಿಳಾಸಕ್ಕೆ ಸಂಪರ್ಕಿಸಿ,” ಎಂಬ ಪ್ರಕಟಣೆಯೊಂದು ಪತ್ರಿಕೆಯಲ್ಲಿ ಬಂದರೆ, ಅದನ್ನು
ನೋಡಿದವರಲ್ಲಿ ನೂರಕ್ಕೆ ಕನಿಷ್ಟವೆಂದರೆ ತೊಂಬತ್ತು ಮಂದಿ ಸಂಪರ್ಕಿಸುವುದರಲ್ಲಿ ಸಂದೇಹವಿಲ್ಲ. ಈ
ಸಾಲುಗಳಿಂದ ಪ್ರಬಂಧವು ಶುರುವಾಗು ತ್ತದೆ.
ಮುಂದುವರೆದು -
ಸುಖ ಯಾರಿಗೆ ಬೇಡ? ಅಥವಾ
ಸುಖ ಯಾರಿಗಿದೆ? ನೀವು ಸುಖಿಗಳೆ? ಎಂದು
ಯಾರನ್ನಾದರೂ ಕೇಳಿದಾಗ ಅವರ ಪ್ರಾಮಾಣಿಕ ಉತ್ತರ “ಇಲ್ಲ” ಎಂದು
ಬರುವುದು.
ಬೆಂಗಳೂರಿನ ಯಾವುದೇ
ಮುಖ್ಯ ರಸ್ತೆಯಲ್ಲಿ ಒಂದು ಬೆಳಗ್ಗೆ ನಿಂತು ಹಾದುಹೋಗುವವರನ್ನು ಪರೀಕ್ಷಿಸಿ. ನೀವು
ಬಾಯಿ ಬಿಟ್ಟು “ನೀವು ಸುಖಿಗಳೇ?” ಎಂದು
ಕೇಳದಿದ್ದರೂ ಇದಕ್ಕೆ ಉತ್ತರ ಅವರ ಮುಖಗಳಲ್ಲಿ ಎದ್ದು ಕಾಣುತ್ತಿರುವ ಆತಂಕ, ಆತುರ, ಭಯ, ನಿರುತ್ಸಾಹಗಳ
ಮೂಲಕ ನಿಮಗೆ ಸಿಗುವುದು. ಅದೇ ರೀತಿ ಸಂಜೆ ಸಮಯದಲ್ಲೂ ಅವರುಗಳಲ್ಲಿ ಎದ್ದು ಕಾಣುವ ಬೇಸರ, ಆಲಸ್ಯಗಳ
ಮೂಲಕ ಉತ್ತರ ಸಿಗುವುದು.
ಜನಗಳು ಬಹುತೇಕವಾಗಿ
ಹೋಟೆಲಿಗೆ, ಚಲನಚಿತ್ರ ಮಂದಿರಕ್ಕೆ ಅಥವಾ ಪಾನಗೃಹಕ್ಕೆ ಹೋಗುವುದು ಸಿಗದ
ಸುಖವನ್ನು ಬೆನ್ನಟ್ಟಿ. ಆದರೆ ಅವರಿಗೆ ದೊರಕುವುದು ನಿರಾಶೆ, ಅಸುಖ. ಈ ಅಸುಖವೆಂಬುದು ಸುಲಭವಾಗಿ ಸೋಲುವುದಿಲ್ಲ ಬದಲಾಗಿ ಅದು ಅಮರ, ಅದಕ್ಕೆ
ಸಾವಿಲ್ಲ.
ಎಚ್ಚೆಸ್ಕೆಯವರು ಸುಖಿಯಾರು? ಸುಖಿ
ಎಂಬುದು ಏನು? ಸುಖಿಯಾಗುವುದು ಹೇಗೆ ಎಂಬುದಕ್ಕೆ ಒಂದು ಉದಾಹರಣೆಯನ್ನು ಕೊಡುತ್ತಾರೆ. ಅದರ
ಸಾರಾಂಶ ಈ ರೀತಿ :-
ಒಮ್ಮೆ ಒಬ್ಬ ರಾಜ ತನ್ನ
ರಾಜ್ಯದಲ್ಲಿ ಯಾರು ಸುಖಿಯಾಗಿರುವರು ಎಂಬುದನ್ನು ಅರಿಯಲು ತನ್ನ ಸೈನಿಕರನ್ನು ಕಳುಹಿಸುವನು. ಅವರು
ರಾಜ್ಯವನ್ನೆಲ್ಲಾ ಸುತ್ತಿ ಅನೇಕರನ್ನು ಪ್ರಶ್ನಿಸಿ ನಿರಾಶರಾಗಿ ಕಡೆಗೆ ರಾಜ್ಯದ ಆಚೆಯ ಕಾಡಿನಲ್ಲಿ
ಒಂದು ಮರದ ಕೆಳಗೆ ಚಿಂದಿ ಬಟ್ಟೆ ತೊಟ್ಟು ಹಾಯಾಗಿ ಮಲಗಿದ್ದ ಒಬ್ಬನನ್ನು ಪ್ರಶ್ನಿಸಿದಾಗ ಅವನು ಆಶ್ಚರ್ಯಚಕಿತನಾಗಿ
ಅದೇನೆಂದು ತನಗೆ ಗೊತ್ತಿಲ್ಲವೆಂದೂ ಹಾಗೂ ತನಗೆ ಎಂದೂ ಸುಖ-ಅಸುಖಗಳ
ಬಗ್ಗೆ ಯೋಚಿಸಿಯೇ ಇಲ್ಲವೆಂದ. ಅವನಿಗೆ ಬೆಳಗಾದರೆ ಏನಾದರೂ ಕೂಲಿ ಕೆಲಸ, ಅದರಿಂದ
ದೊರಕಿದ ಹಣದಲ್ಲಿ ಸಿಕ್ಕಷ್ಟು ಆಹಾರ,
ನಿದ್ದೆ ಬಂದಾಗ ಬಂದಲ್ಲಿ ನಿದ್ದೆ, ಹಾಗೂ
ಅವನಿಗೆ ಖಾಯಿಲೆ ಎಂದೂ ಬಾಧಿಸಿರಲಿಲ್ಲ.
ಮುಗಿಯಿತು. ಇನ್ನು ಚಿಂತೆಯೇಕೆ?
ಈ ಘಟನೆಯು ನಿಜವೋ ಸುಳ್ಳೋ
ಎಂದು ಚರ್ಚಿಸುವುದರ ಬದಲಾಗಿ ಹೀಗೆ ಎಂದು ಊಹಿಸಿಕೊಳ್ಳಲು ಸಾಧ್ಯವಾಗ ಬಹುದಲ್ಲವೆ?
ಈಗಿನ ಮನುಷ್ಯನು ಈ
ರೀತಿ ಸುಖಿಯಾಗಿರಬಲ್ಲನೆ? ಇದಕ್ಕೆ ಎಚ್ಚೆಸ್ಕೆಯವರ ಉತ್ತರ - ಸುತ್ತಮುತ್ತಣ
ನೂರು ಆಕರ್ಷಣೆಗಳೂ ಸಾವಿರ ಪ್ರಲೋಭನೆಗಳೂ ಹಾಗೂ ಸಂಬಂಧಗಳೂ ಇಲ್ಲದಿದ್ದಲ್ಲಿ ಸುಖಿಯಾಗಿರಲು ಸಾಧ್ಯ. ಪ್ರಾಣಿಗಳು
ಹೀಗೆ ಸುಖಿಯಾಗಿರಲು ಸಾಧ್ಯ. ಅವುಗಳಿಗೆ ತಿನ್ನಲು ಸಾಕಷ್ಟು ಅಹಾರವಿದ್ದಲ್ಲಿ ಅಸುಖವೆಂಬುದೇ
ಇಲ್ಲ.
ಆದರೆ ಮನುಷ್ಯ ಹೀಗಿರಲಾರ. ಏಕೆಂದರೆ
ಅವನು ಸಮಾಜ ಜೀವಿ ಹಾಗೂ ಅವನಿಗೆ ಮನಸ್ಸು ಎಂಬುದೊಂದಿದೆ.
ಮನುಷ್ಯ ಅಸುಖಿ ಏಕಾಗುವನು
ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಅದಕ್ಕೆ ಉತ್ತರವನ್ನು ಎಚ್ಚೆಸ್ಕೆಯವರು ಈ ರೀತಿ ನೀಡುತ್ತಾರೆ:
ಭಗವದ್ಗೀತೆಯ ಪ್ರಕಾರ “ಮನುಷ್ಯನ
ಅಸುಖಕ್ಕೆ ಪ್ರಾಪಂಚಿಕ ವಿಷಯಗಳಲ್ಲಿ ಅತಿಯಾದ ಆಸಕ್ತಿಯೇ ಕಾರಣ.”
“ಸಂಗದಿಂದ ಕಾಮ, ಕಾಮದಿಂದ
ಕ್ರೋಧ, ಕ್ರೋಧದಿಂದ ಸಂಮೋಹ, ಸಂಮೋಹದಿಂದ
ಸ್ಮೃತಿ ವಿಭ್ರಮ; ಆದ್ದರಿಂದ ಸಂಗತ್ಯಾಗವೇ ಸುಖಕ್ಕೆ ಉಪಾಯ” ಎಂದು
ವಿವರಿಸುತ್ತದೆ ಭಗವದ್ಗೀತೆ.
“ಇಷ್ಟು ದೊರಕಿದರೆ ಮತ್ತಷ್ಟು ಬೇಕೆಂಬಾಸೆ. ಅಷ್ಟು
ದೊರಕಿದರೂ ಮತ್ತಷ್ಟರಾಸೆ” ಎಂದು ದಾಸವರೇಣ್ಯರೂ ಹೇಳಿರುವರು.
“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ.”
ನಮ್ಮ ನಾಗರೀಕತೆ ಬೆಳೆದಂತೆಲ್ಲಾ
ನಮ್ಮ ಅತೃಪ್ತಿ ಅಸುಖಗಳೂ ಹೆಚ್ಚುತ್ತಲೇ ಇರುವುದು ಎನ್ನುತ್ತಾ ಅದರ ಬಗ್ಗೆ ಎಚ್ಚೆಸ್ಕೆಯವರು ಹಲವಾರು
ಉದಾಹರಣೆಗಳನ್ನು ನೀಡುತ್ತಾ ಕೊನೆಗೆ
- “ ತಣಿಸಲಾಗದಷ್ಟು ಬಗೆಯ, ಅಸಂಖ್ಯಾತವಾದ, ಅಪೇಕ್ಷೆಗಳ
ಫಲವಾಗಿ ಮನುಷ್ಯ ಸತತವಾದ ಅತೃಪ್ತಿಗೆ,
ಅಸುಖಕ್ಕೆ ಒಳಗಾಗಿದ್ದಾನೆನ್ನಬಹುದು. ಮನುಷ್ಯನಿಗೆ
ಸುಖ ದೊರಕಬೇಕಾದರೆ ತೃಪ್ತಿ ಕಲಿಯಬೇಕು;
ಆದಷ್ಟು ಕಡಿಮೆ ಸಂಖ್ಯೆಯ ಅಪೇಕ್ಷೆಗಳನ್ನು ಹೊಂದಿರಬೇಕು; ಅಂದರೆ
ಸರಳ ಜೀವನ ನಡೆಸಬೇಕು” ಎನ್ನುತ್ತಾರೆ.
ಮುಂದುವರೆದು ಎಚ್ಚೆಸ್ಕೆಯವರು
ಇದರ ಮತ್ತೊಂದು ಮಜಲನ್ನೂ ಬಿಚ್ಚಿಡುತ್ತಾರೆ.
ಮನುಷ್ಯ ಮನುಷ್ಯನಾಗಿ
ಹುಟ್ಟಿರುವುದು ಪ್ರೀತಿಸುವುದಕ್ಕೆ,
ದ್ವೇಷಿಸುವುದಕ್ಕೆ, ನಗುವುದಕ್ಕೆ, ಅಳುವುದಕ್ಕೆ, ಜೀವನದ
ರಂಗುರಂಗಿನ ಓಕುಳಿಯಾಡುವುದಕ್ಕೆ.
ಇದಾವುದರಲ್ಲೂ ತನ್ನನ್ನು ತೊಡಗಿಸಿಕೊಳ್ಳದೇ ಇರುವವನು ಅಸುಖಿಯಲ್ಲವಾದರೂ
ಸುಖಿಯಂತೂ ಅಲ್ಲವೇ ಅಲ್ಲ. ಸುಖ ಅಸುಖಗಳನ್ನು ಅರಿಯುವ ಶಕ್ತಿಯನ್ನು ಅವನು ಕಳೆದುಕೊಂಡು
ನಾದವೇ ಹೊರಡದ ಕೊಳಲಿನಂತಾಗುವನು.
ಸುಖದ ಹಾದಿ ಯಾವುದಾದರೂ
ಇರಲಿ, ಅಸುಖವೆಂದರೇನೆಂದು ಸುಲಭವಾಗಿ ಇತ್ಯರ್ಥವಾಗುವ ವಿಚಾರವಲ್ಲ.
ಎಚ್ಚೆಸ್ಕೆಯವರು ಅಸುಖದ
ಬಗ್ಗೆ ಹಲವಾರು ಉದಾಹರಣೆಗಳೊಂದಿಗೆ ಪ್ರಬಂಧದಲ್ಲಿ ದೀರ್ಘವಾಗಿ ಚರ್ಚೆಮಾಡಿದ್ದಾರೆ. ಅವುಗಳಲ್ಲಿ
ಕೆಲವನ್ನು ನೋಡೋಣ:
ಅನೇಕರ ಅಸುಖಕ್ಕೆ ಅವರ
ಮಾನಸಿಕ ಸ್ಥಿತಿಯೇ ಕಾರಣ. ಕೆಲವರು ಯಾವಾಗಲೂ ತಮ್ಮ ಆರೋಗ್ಯದ ಬಗ್ಗೆಯೇ ಚಿಂತಿಸುತ್ತಿರುತ್ತಾರೆ. ಬೆಳಗಿನಿಂದ
ಸಂಜೆಯವರೆಗೆ ತಮ್ಮ ದೇಹಸ್ಥಿತಿಯಲ್ಲಿ ಆಗಿದೆಯೆಂದು ಅವರು ತಿಳಿದುಕೊಂಡ ಏರುಪೇರುಗಳನ್ನೆಲ್ಲಾ ಬಣ್ಣಕಟ್ಟಿ
ಇತರರಿಗೆ ವಿವರಿಸಿದಾಗಲೇ ಅವರಿಗೆ ತೃಪ್ತಿ.
ಇದು ಅವರ ದೃಷ್ಟಿಯಲ್ಲಿ ಪತ್ತೇದಾರಿ ಕಾದಂಬರಿಗಿಂತ ರೋಚಕವಾದದ್ದು. ಇದನ್ನು
ಆಲಿಸಿದ ಇತರರು ಇದನ್ನು ಒಪ್ಪದಿದ್ದರೆ ಅದನ್ನು ವಿವರಿಸಿದಾತನ ಮನಸ್ಸು ಮತ್ತೂ ಖಿನ್ನವಾಗಿ ಆತನು ಮತ್ತಷ್ಟು
ಅಸುಖಿಯಾಗುವನು. ಅವರಿಗೆ ತಮ್ಮ ರೋಗ ಒಂದು ಹೆಮ್ಮೆಯ ವಿಚಾರ. ಅವರು
ಯಾವುದಾದರೂ ಅತಿ ವೆಚ್ಚದ ಶಸ್ತ್ರಚಿಕಿತ್ಸೆಯನ್ನು ಮಾಡಿಸಿ ಕೊಂಡಿದ್ದ ರಂತೂ ಕೆಳಬೇಕಾಗಿಲ್ಲ. ಅದನ್ನು
ಕಂಡ ಕಂಡವರ ಬಳಿ ಅವರಿಗೆ ಬೇಕಿರಲಿ ಬೇಡವಾಗಿರಲಿ ಅದನ್ನು ಸಾದ್ಯಂತವಾಗಿ,ಶಸ್ತ್ರಚಿಕಿತ್ಸೆಗೆ
ತಗಲಿದ ವೆಚ್ಚವನ್ನು ಸಂಭ್ರಮದಿಂದ ಹೇಳಿಕೊಂಡಾಗಲೇ ಅವರಿಗೆ ತೃಪ್ತಿ.
ಕೆಲವರು ಗಂಟೆಗಟ್ಟಳೆ
ಕಛೇರಿಯಲ್ಲಿ, ಬಸ್ಸಿನಲ್ಲಿ, ಪಾರ್ಕಿನಲ್ಲಿ, ಬೇರೆಯವರ
ಮನೆಗೆ ಭೇಟಿಕೊಟ್ಟಾಗ, ಅಷ್ಟೇ ಯಾಕೆ ದಾರಿಯಲ್ಲಿ ಯಾರಾದರೂ ಸ್ನೇಹಿತರು ಸಿಕ್ಕಿದಲ್ಲಿ
ತಮ್ಮ ತೊಂದರೆಗಳನ್ನು ಹೇಳಿಕೊಳ್ಳುವುದರಲ್ಲಿ ಅವರಿಗೆ ಹೆಮ್ಮೆ. ತಮ್ಮ
ಬಗ್ಗೆ ತಮಗೇ ಕನಿಕರ. ಇಂಥವರು ತಾವು ಅಸುಖಿಗಳಾಗುವುದಲ್ಲದೇ ಇತರರನ್ನೂ ಅಸುಖಿಗಳನ್ನಾಗಿಸುತ್ತಾರೆ. ಅವರಿಗೆ
ತಮ್ಮದೇ ವಿಷಯ, ತಮ್ಮದೇ ಕೊರೆತ, ತಮ್ಮದೇ
ಮೊರೆತ. ಇತರರ ಬಗ್ಗೆ ಕೊಂಚವೂ ಆಸಕ್ತಿಯಿರುವುದಿಲ್ಲ. ಇಂಥಹವರನ್ನು
ನೀವು ಖಂಡಿತವಾಗಿಯೂ ನೋಡಿರಲೇ ಬೇಕು.
ಜೀವನದಲ್ಲಿ ಸುಖಕ್ಕೆ
ಎರಡು ಬಗೆಯ ಕಾರಣಗಳಿವೆ. ಒಂದು ಬಾಹ್ಯ, ಇನ್ನೊಂದು ಆಂತರಿಕ. ಸಂಪತ್ತಿನ
ಸೂಕ್ತವಾದ ಹಂಚಿಕೆ, ಜ್ಞಾನದ ಉಚಿತ ಪ್ರಸಾರ - ಇವುಗಳು
ಬಾಹ್ಯ ಕಾರಣಗಳು. ಆದರೆ ಇವಿಷ್ಟೇ ಇದ್ದರೂ ಮನುಷ್ಯನಿಗೆ ಸುಖ ದೊರಕಲಾರದು. ಮನುಷ್ಯನ
ಅಸುಖಕ್ಕೆ ಮುಖ್ಯವಾದ ಆಂತರಿಕ ಕಾರಣವೆಂದರೆ ಅವನ ಮನಸ್ಸು. ಯಾವಾಗಲೂ
ತನ್ನ ಬಗ್ಗೆಯೇ ಚಿಂತಿಸುವ ಮನುಷ್ಯ ಸುಖಪಡಲಾರ. ಸುಖವೆಂಬುದು ಕಣ್ಣಿಗೆ ಕಾಣುವ, ಆದರೆ
ಸದಾ ದೂರ ಜಾರುತ್ತಲೇ ಇರುವ, ಮರೀಚಿಕೆಯಾಗುತ್ತದೆ ಇಂಥವರಿಗೆ.
ತನ್ನ ಬಗ್ಗೆಯೇ ಚಿಂತಿಸುವ
ಜನ ಸಾಮಾನ್ಯವಾಗಿ ಮೂರು ತರವೆಂದು ಎಚ್ಚೆಸ್ಕೆಯವರು ವಿವರಿಸುತ್ತಾರೆ - ಯಾವಾಗಲೂ
ತಾನು ಪಾಪಕೃತ್ಯ ಎಸಗುತ್ತಿರುವುದಾಗಿ ಭಾವಿಸುವವರು ಒಂದು ತೆರವಾದರೆ, ತನ್ನ
ಬಗ್ಗೆ ತಾನೇ ಹೆಮ್ಮೆ ಪಟ್ಟುಕೊಳ್ಳುವ
- ಸ್ವಾನುರಕ್ತ ಇನ್ನೊಂದು ತೆರ. ಮೂರನೆಯವನು
ತಾನು ಯಾವಾಗಲೂ ಮಹತ್ತಾದುದನ್ನು ಮಾಡ ಬೇಕು,
ಇತರರಿಂದ ಹೊಗಳಿಸಿಕೊಳ್ಳ ಬೇಕೆಂಬ ಮಹತ್ವಾಕಾಂಕ್ಷೆ -ಮಹತ್ವೋನ್ಮಾದ
ಹೊಂದಿರುವವರು. ಈ ಮೂರೂ ಬಗೆಯ ಜನಗಳು ಒಂದಲ್ಲಾ ಒಂದು ರೀತಿಯಲ್ಲಿ ಅಸುಖಿಗಳಾಗಿರುತ್ತಾರೆ.
ಕೆಲವರು ಯಾವಾಗಲೂ ತಾವು
ಪಾಪಿಗಳೆಂದೇ ಬಗೆಯುವರೆಂದು ಹೊಸ ಗುಂಪಿನ ಅಸುಖಿಗಳ ಬಗ್ಗೆ ಎಚ್ಚೆಸ್ಕೆಯವರು ವಿವರಿಸುತ್ತಾರೆ -
ಯಾವುದು ಪಾಪ, ಯಾವುದು
ಪುಣ್ಯ - ಎಂಬ ವಿವೇಚನೆ ಇವರಿಗೆ ಮುಖ್ಯವಲ್ಲ. ಯಾವುದೋ
ಒಂದನ್ನು ಪಾಪವೆಂದು ಇವರು ಬಗೆಯುತ್ತಾರೆ.
ಆದರೆ ಅದನ್ನು ಇವರು ಮಾಡುತ್ತಿರಬೇಕಾಗುತ್ತದೆ. ಯಾವಾಗಲೂ
ತಮ್ಮನ್ನು ತಾವೇ ಹಳಿದುಕೊಳ್ಳುತ್ತಿರುತ್ತಾರೆ. ಈ ಪಾಪಿ ಜೀವ ಇದನ್ನೆಲ್ಲಾ
ಮಾಡಬೇಕಾಗಿ ಬಂತಲ್ಲ - ಎಂದು ಸದಾ ಅಂದುಕೊಳ್ಳುತ್ತಾರೆ. ತಾವು
ಹೇಗಿರಬೇಕೆಂಬ ಆದರ್ಶದ ಕಲ್ಪನೆ ಇವರಿಗಿರುತ್ತದೆ. ಆದರೆ ಇವರು ಇರುವುದು
ತದ್ವಿರುದ್ಧ. ಆದ್ದರಿಂದ ಇವರ ಮನಸ್ಸಿನಲ್ಲಿ ಸದಾ ಘರ್ಷಣೆ ನಡೆಯುತ್ತಲೇ ಇರುತ್ತದೆ. ಇವರು
ಪಾಪದ ಕೆಸರಿನಲ್ಲೇ ಹೂತುಹೋಗುತ್ತಾರೆ.
ಚಿಕ್ಕಂದಿನಲ್ಲಿ ಇವರು ಕಲಿತ ನೀತಿಪಾಠ ಇವರನ್ನು ಸದಾ ಕಾಡಿಸುತ್ತಿರುತ್ತದೆ. ಇಂಥವರು
ಸುಖಿಗಳಾಗಿರಬೇಕಾದರೆ ಏನನ್ನು ಮಾಡಬೇಕೆಂಬುದನ್ನು ಎಚ್ಚೆಸ್ಕೆಯವರು ಸುಲಭವಾಗಿ ವಿವರಿಸುತ್ತಾರೆ - ಮೊದಲು
ತಾನು ಪಾಪಿ ಎಂದುಕೊಳ್ಳುವುದನ್ನು ಬಿಡಬೇಕು.
ತನ್ನನ್ನು ತಾನೇ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಿ ವಿಚಾರಣೆ
ಮಾಡುವುದನ್ನು ನಿಲ್ಲಿಸಬೇಕು. ಸಹಜವಾಗಿ ಹಾಗೂ ಮತ್ತೊಬ್ಬರಿಗೆ ತೊಂದರೆಯುಂಟುಮಾಡದೇ, ಸಂತೋಷ
ಅನುಭವಿಸುವುದನ್ನೂ ಕಲಿಯಬೇಕು.
ತನ್ನಲ್ಲೇ ತಾನು ಅತಿಯಾಗಿ ಆಸಕ್ತಿ ವಹಿಸುವುದನ್ನು ಬಿಟ್ಟು, ಇತರರ
ನಡುವೆ ಬೆರೆತು ತನ್ನನ್ನು ಮರೆಯುವುದನ್ನು ಕಲಿತರೆ, ಸುಖಿಯಾಗಿರಬಹುದು.
ಸ್ವಾನುರಕ್ತರ ಬಗ್ಗೆ
ವಿವರಿಸುತ್ತಾ ಇವರಿಗೆ ಸೂಕ್ತ ಔಷಧವನ್ನು ಎಚ್ಚೆಸ್ಕೆಯವರು ಈ ರೀತಿ ನೀಡಲು ಬಯಸುತ್ತಾರೆ -
ಪ್ರತಿಯೊಬ್ಬರೂ ತಮ್ಮನ್ನು
ತಾವೇ ಸ್ವಲ್ಪವಾದರೂ ಮೆಚ್ಚಬೇಕು.
ಇದರಲ್ಲಿ ಅಸಹಜವೇನಿಲ್ಲ. ಆದರೆ
ಇದು ಅತಿಯಾದರೆ ಅನರ್ಥ. ಈ ಸ್ವಾನುರಕ್ತಿ ಸಾಮಾನ್ಯವಾಗಿ ಹೆಂಗಸರಲ್ಲಿ - ಅದರಲ್ಲೂ
ಶ್ರೀಮಂತ ಮಹಿಳೆಯರಲ್ಲಿ ಹೆಚ್ಚು.
ಇಂಥಹವರಲ್ಲಿ ಪ್ರೀತಿಯ ತೊರೆಯೇ ಬತ್ತಿಹೋಗಿರುವುದನ್ನು ನಾವು
ಕಾಣಬಹುದು. ಇತರರು ತಮ್ಮನ್ನೇ ಮೆಚ್ಚಬೇಕು, ಹೊಗಳಬೇಕು, ಪ್ರೀತಿಸಬೇಕೆಂದು
ಸದಾ ಬಯಸುತ್ತಾರೆ. ಕೆಲವು ಕಾದಂಬರಿಕಾರರು, ರಾಜಕಾರಣಿಗಳು
ಈ ವರ್ಗಕ್ಕೆ ಸೇರುತ್ತಾರೆ. ಇವರಿಗೆ ತಾವು ಬಯಸಿದ ಮೆಚ್ಚುಗೆ, ಹೊಗಳಿಕೆ
ಇತ್ಯಾದಿಗಳು ಬರದಿದ್ದಾಗ ಅವರು ಅಸುಖಿಗಳಾಗುತ್ತಾರೆ.
ಮಹತ್ವವಾದುದನ್ನು ಮಾಡಬೇಕೆನ್ನುವ
ಮಹತ್ವೋನ್ಮಾದ ಹೊಂದಿರುವವರ ಬಗ್ಗೆ ಎಚ್ಚೆಸ್ಕೆಯವರು ವಿವರಿಸುತ್ತಾ - ಈ
ಗುಂಪಿನ ಜನರು ಇತರರು ತಮ್ಮನ್ನು ಮೆಚ್ಚಬೇಕು,
ಹೊಗಳಬೇಕು ಎಂದು ಬಯಸುವುದುವುದಿಲ್ಲ, ಬದಲಾಗಿ
ಇತರರು ತನ್ನನ್ನು ಕಂಡರೆ ಅಂಜಬೇಕು,
ಗೌರವಿಸಬೇಕು ಹಾಗೂ ತಲೆಬಾಗಿಸಬೇಕೆಂದು ಬಯಸುತ್ತಾರೆ. ಅಧಿಕಾರದ
ಮೋಹ ಇವರನ್ನು ಉನ್ಮತ್ತರನ್ನಾಗಿಸುತ್ತದೆ.
ಅಂಥವರು ಅತ್ಯಂತ ಅಸುಖಿಗಳು.
ಆದ್ದರಿಂದ ತನ್ನನ್ನು
ತಾನೇ ಹೀಯಾಳಿಸಿಕೊಳ್ಳುವುದರಲ್ಲಿ,
ತನ್ನನ್ನು ತಾನೇ ಅತಿಯಾಗಿ ಮೆಚ್ಚಿಕೊಳ್ಳುವುದರಲ್ಲಿ, ಇರರರು
ತನ್ನನ್ನು ಸದಾ ಓಲೈಸಬೇಕು ಎಂದು ಆಕಾಂಕ್ಷೆ ಹೊಂದಿರುವುದರಲ್ಲಿ ಸುಖವಿಲ್ಲ. ಇವೆಲ್ಲಾ
ಅಸುಖಗಳ ಮೂಲಗಳು. ತನಗೆ ಜಗತ್ತು ಏನೋ ಅನ್ಯಾಯಮಾಡಿದೆ; ತನಗೆ
ದಕ್ಕಬೇಕಾದದ್ದು ಯಾವುದೂ ದಕ್ಕಲಿಲ್ಲ;
ತನ್ನ ಜೀವನ ನೆಟ್ಟಗಾಗಲಿಲ್ಲ; ತನಗೆ
ದೇವರು ಆರೋಗ್ಯ ಕರುಣಿಸಲಿಲ್ಲ,
ಹೀಗೆ ಸದಾ ತನ್ನದೇ ಚಿಂತೆ, ತನ್ನದೇ
ಹಾಡು. ಅಂಥವರು ಸುಖದಿಂದ ಸಾವಿರ ಮೈಲು ದೂರದಲ್ಲಿರುತ್ತಾರೆ. ಇಂಥವರಿಗಾಗಿಯೇ
ದಾಸವರೇಣ್ಯರು -
“ತಲ್ಲಣಿಸದಿರು ಕಂಡ್ಯ ತಾಳು ಮನವೆ” ಎನ್ನುತ್ತಾರೆ.
ಕೊನೆಗೆ ಸುಖದ ಹಾದಿಯ
ಬಗ್ಗೆ ಎಚ್ಚೆಸ್ಕೆಯವರು ಈ ರೀತಿಯಾಗಿ ಹೇಳುತ್ತಾರೆ : “ತನ್ನ ಕೆಲಸವನ್ನು ಪ್ರೀತಿಸುವುದರಿಂದ, ತನ್ನ
ಜನರಲ್ಲಿ ಮಮತೆ ತೋರುವುದರಿಂದ,
ಕಾಣದ ಯಾವುದೋ ಆದರ್ಶಕ್ಕೆ ಹೆಣಗದೆ, ತನ್ನನ್ನು
ನಂಬಿದವರಿಗೆ ಸಹಾಯಕನಾಗಿರುವುದ ರಿಂದ,
ತನ್ನ ವಿಚಾರವನ್ನೇ ಅತಿಯಾಗಿ ಹಚ್ಚಿಕೊಳ್ಳದೆ ಇತರರಲ್ಲಿ ಆಸಕ್ತಿ
ತೋರಿಸುವುದರಿಂದ, ಜಗತ್ತನ್ನು ಅರಿಯಲು ಯತ್ನಿಸುವುದರಿಂದ, ಇತರರಲ್ಲಿ
ಸಂತೋಷವನ್ನು ಹಂಚುವುದರಿಂದ, ಮುನುಷ್ಯ ಸುಖಿಯಾಗಿರಲು ಸಾಧ್ಯ. ಇಂಥ
ಸುಖ ಎಲ್ಲರಿಗೂ ನಿಲುಕುವಂಥದು,
ಶಾಶ್ವತವಾಗಿ ನಿಲ್ಲುವಂಥದ್ದು.
ಇದು ಎಚ್ಚೆಸ್ಕೆಯವರ
ಸುಖದ ಹಾದಿಯ ಪಕ್ಷಿನೋಟ. ಸಂಪೂರ್ಣ ವಿವರವನ್ನು ನಿಮಗೆ ಸಮಯ ಸಿಕ್ಕಾಗ ಓದಿ. ಇದಲ್ಲದೇ
ನಿಮ್ಮ ಗಮನಕ್ಕೆ ಬಂದಿರುವ ಇನ್ನಿತರ ಅಸುಖಿಗಳು, ಅವರ ಅಸುಖಕ್ಕೆ ಕಾರಣಗಳು
ಹಾಗೂ ಅವರು ಸುಖಿಗಳಾಗಿರಬೇಕಾದರೆ ಯಾವ ಮಾರ್ಗವನ್ನನುಸರಿಸಬಹುದು ಎಂಬುದರ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ಳಬಹು
ದಲ್ಲವೇ ? ಬನ್ನಿ,
ನಾವೆಲ್ಲರೂ ಕೂಡಿ ಆನಂದವನ್ನು ಅನುಭವಿಸಿ ಅದನ್ನು ಎಲ್ಲರೊಂದಿಗೂ
ಹಂಚಿಕೊಂಡು ಸುಖದ ಹಾದಿಯಲ್ಲಿ ಪಯಣಿಸೋಣ.
ಸಿರಿಗನ್ನಡಂ ಗೆಲ್ಗೆ
ಮೂಲಗಳು
: ಎಚ್ಚೆಸ್ಕೆ
ಸಮಗ್ರ ಪ್ರಬಂಧಗಳು.