ಎಚ್ಚೆಸ್ಕೆ
ಅವರ
“ಗಡಿಯಾರಗಳು”
ಪ್ರಬಂಧದೊಳಗೆ
ಒಂದು ಕಿರುನೋಟ
ಯಾವುದೇ ಒಂದು ಕೃತಿಯನ್ನು
ಅದು ರಚಿಸಿದ ಸಮಯದಲ್ಲಿ ಓದಿದಾಗ ಓದುಗನ ಮನದಲ್ಲಿ ಮೂಡುವ ಪ್ರತಿಕ್ರಿಯೆ, ಭಾವನೆಗಳು, ಸ್ಪಂದನೆಗಳು
ಅದೇ ಕೃತಿಯನ್ನು ನಾಲ್ಕೈದು ದಶಕಗಳ ನಂತರ ಮತ್ತೆ ಓದಿದಾಗ ಬೇರೆಯದೇ ಆಗಿರಬಹುದು. ಆಗಿರಬಹುದೇನು
ಆಗಿಯೇ ಆಗುತ್ತದೆ. ಇದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು. ಓದುಗನಲ್ಲಾಗುವ
ಪ್ರಬುದ್ಧತೆ, ಕಾಲಬದಲಾವಣೆ, ಪರಿಸರದಲ್ಲಿನ ಬದಲಾವಣೆ
ಇತ್ಯಾದಿ.
ಸುಮಾರು ೫೬ ವರ್ಷಗಳ
ಹಿಂದೆ (೧೯೬೨) ರಲ್ಲಿ
ಎಚ್ಚೆಸ್ಕೆ ಯವರು ರಚಿಸಿದ “ಗಡಿಯಾರ” ಪ್ರಬಂಧವನ್ನು ಮೊದಲಿಗೆ
ನಾನು ಓದಿದ್ದು ೧೯೭೨ ರಲ್ಲಿ, ಸಾರ್ವಜನಿಕ ಗ್ರಂಥಾಲಯದಲ್ಲಿದ್ದ ಒಂದು ಪ್ರಬಂಧ ಸಂಕಲನದಲ್ಲಿ. ಆಗ
ಅದು ಕುತೂಹಲಕಾರಿ ಹಾಗೂ ಹಾಸ್ಯಮಿಶ್ರಿತ ಭಾವನೆಗಳನ್ನು ಉಂಟುಮಾಡಿತ್ತು.
ಅದೇ ಪ್ರಬಂಧವನ್ನು
೨೦೦೮ ರಲ್ಲಿ ಪ್ರಕಟವಾದ “ಎಚ್ಚೆಸ್ಕೆ - ಸಮಗ್ರ ಪ್ರಬಂಧಗಳು” ಕೃತಿಯನ್ನು
ಇತ್ತೀಚೆಗೆ ಓದಿದಾಗ ಬೇರೆಯದೇ ಭಾವನೆಗಳು
- ಸಮಯಕ್ಕೆ ನೀಡಬೇಕಾದ ಪ್ರಾಧಾನ್ಯತೆ,ಜೀವನಮೇಲೆ
ಬೀರುವ ಸಮಯದ ಪ್ರಭಾವ ಇತ್ಯಾದಿ.
ಅದೇನೇ ಇರಲಿ, ಈ
ಪ್ರಬಂಧವು ಸಾರ್ವಕಾಲಿಕವಾದುದು ಹಾಗೂ ಇದು ಎಲ್ಲ ವರ್ಗದ ಜನರಿಗೂ ಅನ್ವಯಿಸುವಂಥದ್ದು.
ಮನೆಯಲ್ಲಿರುವ ವಿವಿಧ
ರೀತಿಯ ಗಡಿಯಾರಗಳು, ಕಿಸೆಯೊಳಗಿನ ಗಡಿಯಾರ, ಮುಂಗೈಯಲ್ಲಿ
ಕಟ್ಟಿಕೊಂಡಿರುವ ಗಡಿಯಾರ, ಅಂಗಡಿಯಲ್ಲಿ ನೇತುಹಾಕಿರುವ ಗಡಿಯಾರ, ಗೋಪುರದಲ್ಲಿ
ಸ್ಥಾಪಿಸಿರುವ ಗಡಿಯಾರ, ಹೋಟೆಲಿನಲ್ಲಿರುವ ಗಡಿಯಾರ, ಕಛೇರಿಯಲ್ಲಿನ
ಗಡಿಯಾರ, ಗಡಿಯಾರದ ಅಂಗಡಿಯೊಳಗೆ ನೇತು ಹಾಕಿರುವ ಅನೇಕ ಗಡಿಯಾರಗಳು, ಹೀಗೆ
ಅನೇಕ ರೀತಿಯ ಗಡಿಯಾರಗಳು ಹಾಗೂ ಅವುಗಳ ವೈಶಿಷ್ಟ್ಯತೆ, ಅವುಗಳು
ನೋಡುಗರ ಮೇಲೆ ಬೀರುವ ಪ್ರಭಾವ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಅವುಗಳ ವರ್ತನೆಗಳು ಇತ್ಯಾದಿ ಪ್ರಬಂಧದಲ್ಲಿ
ಬಂದು ಓದುಗನ ಕುತೂಹಲವನ್ನು ಹಿಡಿದಿಟ್ಟುಕೊಳ್ಳುತ್ತದೆ.
ಗಡಿಯಾರ ತೋರಿಸುವ ಸಮಯವು
ಹಿಂದೋ ಅಥವಾ ಮುಂದೋ ಆಗಿದ್ದಲ್ಲಿ ಅದನ್ನು ಯಾವ ರೀತಿ ನಾವು ಸ್ವೀಕರಿಸಬೇಕು ಹಾಗೂ ಆ ಸಂದರ್ಭದಲ್ಲಿ
ನಮ್ಮ ಪ್ರತಿಕ್ರಿಯೆ ಹೇಗಿರಬೇಕು,
ಇವೆಲ್ಲ ವಿಷಯಗಳೂ ಪ್ರಬಂಧದಲ್ಲಿ ಬಂದು ನಮ್ಮನ್ನು ಅಚ್ಚರಿಗೊಳಿಸುತ್ತದೆ.
ಗಡಿಯಾರಗಳ ವಿಷಯದಲ್ಲಿ
ಉಂಟಾಗುವ ವಿಸ್ಮಯ, ಅವುಗಳ ಗುಣಸಮೂಹಗಳ ಬಗೆಗೆ ಪ್ರಬಂಧದಲ್ಲಿ ವಿವರವಾಗಿ ವರ್ಣಿಸಲಾಗಿದೆ. ಹಿಂದಿನ
ಕಾಲದಲ್ಲಿ (ಅಂದರೆ ಸುಮಾರು ಅರ್ಧ ಶತಮಾನ ಹಿಂದೆ ) ಮನೆಗಳಲ್ಲಿ
ಇದ್ದ ಗಡಿಯಾರಗಳು ಹೇಗೆ ಆಯಾ ಮನೆಗಳಲ್ಲಿನ ಸಂಸಾರದಲ್ಲಿ ನಡೆದ ನಾನಾ ಘಟನೆಗಳಿಗೆ ಸಾಕ್ಷಿಯಾಗಿ ಗೋಡೆಯ
ಮೇಲೆ ನೇತಾಡಿಕೊಂಡೋ, ಗೂಡಿನೊಳಗೋ ಕುಳಿತಿರಬಹುದು ಹಾಗೂ ಹೇಗೆ ಅವುಗಳ ಮೇಲೆ ಕಾಲದ
ಪ್ರಭಾವವು ಉಂಟಾಗಿರಬಹುದು (ಬಣ್ಣ ಕಳೆದುಕೊಳ್ಳುವುದು, ಒಂದು
ಮುಳ್ಳು ಮುರಿದಿರುವುದು, ಅದರ ತಲೆಯ ಮೇಲಿನ ಕುಲಾವಿ ಕಳಚಿರುವುದು ಇತ್ಯಾದಿ) ಎಂಬುದನ್ನು
ಪ್ರಬಂಧದಲ್ಲಿ ಕುತೂಹಲಕರವಾಗಿ ವರ್ಣಿಸಲಾಗಿದೆ. ಈ ಎಲ್ಲ ವರ್ಣನೆಗಳೂ
ಒಂದಲ್ಲ ಒಂದು ಮನೆಯಲ್ಲಿ ಉಂಟಾಗಿರುವ ಸಂದರ್ಭಗಳೇ. ಇಷ್ಟೆಲ್ಲಾ ಆದರೂ ಮನೆಯಲ್ಲಿನ
ಗಡಿಯಾರು ಎಷ್ಟರ ಮಟ್ಟಿಗೆ ಪ್ರಾಮಾಣಿಕವಾದದ್ದು ಎಂಬುದನ್ನು ಎಲ್ಲ ಕಾಲದವರೂ ಗಮನಿಸಬಹುದು.
ಮುಂದುವರೆದು ಎಚ್ಚೆಸ್ಕೆಯವರು
“ಗಡಿಯಾರವು ನಿರ್ಜೀವವಲ್ಲ, ಅದಕ್ಕೂ
ರಾಗದ್ವೇಷಗಳುಂಟೆ? ಅದೂ ಕೂಡಾ ಮನುಷ್ಯರಂತೆ ಪ್ರೀತಿಸುವುದೆ? ಪ್ರೀತಿಸಿದ
ವ್ಯಕ್ತಿ ದೊರಕದಿದ್ದಾಗ ಅದೂ ಕೂಡಾ ಒಂಟಿಯಾಗಿ ಕೊರಗುವುದುಂಟೆ ? ಅವರ
ಮನೆಯ ಗಡಿಯಾರಕ್ಕೂ ಇಂಥ ಅನುಭವಗಳು ಒದಗಿತ್ತೇ ? ಅಥವಾ ಅದು ಇವೆಲ್ಲವನ್ನೂ
ಮೀರಿ ನಿಂತಿದೆಯೇ ?” ಹೀಗೆ ನಾನಾ ರೀತಿ ಯೋಚಿಸುತ್ತಾರೆ.
ಹೇಗೆ ಕೆಲವರು ಗಡಿಯಾರದ
ಮುಳ್ಳಿನ ಪರಿಭ್ರಮಣೆಗೆ ಹೊಂದಿಕೊಂಡಂತೆ ತಮ್ಮ ಜೀವನವನ್ನು ಅಳವಡಿಸಿಕೊಳ್ಳುವರು, ಅದರ
ಸಾಧಕ - ಬಾಧಕ,
ಹೇಗೆ ಗಡಿಯಾರದ ಘಂಟೆ ಬಾರಿಸಿದ ಕೂಡಲೇ ರೇಡಿಯೋ ನಿಲ್ಲುವುದು, ಅಧ್ಯಾಪಕನ
ಪ್ರವಚನ ನಿಲ್ಲುವುದು, ರೈಲು ಹೊರಡುವುದು, ಸಿನೆಮಾ
ಪ್ರಾರಂಭವಾಗುವುದು ಇತ್ಯಾದಿ ಘಟನೆಗಳು ಕಾಲಾಧೀನವಾಗಿರುವುದು ಎಂಬುದನ್ನು ಕುತೂಹಲಕರವಾಗಿ ವಿವರಿಸಿದ್ದಾರೆ.
ಆದರೆ ಹಲವಾರು ಬಾರಿ
ಜೀವನದ ರಸನಿಮಿಷಗಳು, ವಿಷನಿಮಿಷಗಳು ಮುನ್ಸೂಚನೆ ನೀಡದೆ ವೇಳಾಪಟ್ಟಿಯ ನಿಯಮಕ್ಕೆ ಸಿಲುಕದೇ
ಬಂದು ಹೋಗುವುದು. ಹಾಗೇ ನಗು, ಅಳು, ಪ್ರೇಮ, ಸಾವು
ಇವುಗಳು ಯಾರ ಅಧೀನದಲ್ಲೂ ಇರುವುದಿಲ್ಲ.
ಇವುಗಳ ಬರುವಿನ ಮುನ್ಸೂಚನೆಯಿಲ್ಲದೆ, ವೇಳಾಪಟ್ಟಿಯಲ್ಲಿ
ಇವುಗಳ ಉಲ್ಲೇಖವಿಲ್ಲದೆ, ಇವು ಬಂದಾಗ ಇವನ್ನು ಗುರುತಿಸಲಾಗದೆ, ಸ್ವಾಗತಿಸಲಾರದೆ
ಹೋಗುತ್ತಾರೆ. ಜೀವನದ ನಿಜವಾದ ಅರ್ಥ-ತಿರುಳು - ಇವರಿಂದ
ಜಾರಿಹೋಗುತ್ತದೆ.
ಯಾವ ಎರಡು ಗಡಿಯಾರಗಳೂ
ಒಂದೇ ಹೊತ್ತನ್ನು ತೋರಿಸುವುದಿಲ್ಲ ಎಂಬ ನಾಣ್ಣುಡಿ ಇರುವುದು ನಿಜ. ಆದರೆ
ಗಡಿಯಾರದಿಂದ ಗಡಿಯಾರಕ್ಕೆ ಇರುವ ವ್ಯತ್ಯಾಸದ ಹಿಂದೆ ಯಾವ ನಿಯಮವೂ ಇಲ್ಲವೆ ಎಂದು ಪ್ರಶ್ನಿಸಿಕೊಳ್ಳುತ್ತಾರೆ
ಎಚ್ಚೆಸ್ಕೆಯವರು. ಅದೇ ಉಸಿರಿನಲ್ಲಿ ಅದಕ್ಕೆ ಉತ್ತರವನ್ನೂ ಉದಾಹರಣೆ ಸಹಿತ ಸುಂದರವಾಗಿ
ಈ ಕೆಳಕಂಡಂತೆ ನಮಗೆ ವಿವರಿಸುತ್ತಾರೆ
:
ಸೈಕಲ್ ಅಂಗಡಿಯ ಸುಲೇಮಾನ್
ಮುಸಲ್ಮಾನನೇ ಆದರೂ ಅವನ ಗಡಿಯಾರ ಹಿಂದು
! (ಅಂದರೆ ನಿಧಾನ ಎಂದು). ಈ
ಅಂಗಡಿಯ ಗಡಿಯಾರ ಮುಂಜಾನೆ ಹಿಂದಾಗಿದ್ದದ್ದು ಸಮಯ ಸರಿಯುತ್ತಿದ್ದಂತೆ ಮಧ್ಯಾನ್ಹದ ವೇಳೆಗೆ ಮುಂದಾಗುತ್ತದೆ. ಇದರಿಂದ
ಬಾಡಿಗೆಗೆ ತೆಗೆದುಕೊಂಡು ಹೋಗಿದ್ದ ಗಿರಾಕಿಗಳು ಹೆಚ್ಚಿನ ಬಾಡಿಗೆ ತೆರುವುದರಿಂದ ಅಂಗಡಿ ಮಾಲಿಕನಿಗೆ
ಲಾಭ !
ಹೋಟೆಲಿನ ಗಡಿಯಾರ ಮುಂದಾಗಿರಲಿಕ್ಕೆ
ಸಾಧ್ಯವೇ ಇಲ್ಲ. ಏಕೆಂದರೆ ಕಛೇರಿಗೆ, ರೈಲು, ಬಸ್ಸಿಗೆ
ಹೋಗುವ ಗಿರಾಕಿಗಳು ಗಡಿಯಾರ ಮುಂದಿದ್ದರೆ ತಿಂಡಿ ತಿನ್ನದೇ ಬರೀ ಕಾಫಿಯನ್ನು ಒಂದೇ ಗುಟುಕಿಗೆ ಕುಡಿದು
ಓಡುವರು. ಇದರಿಂದ ಹೋಟಲಿನವನಿಗೆ ವ್ಯಾಪಾರವಾಗದಿರಬಹುದು. ಗಡಿಯಾರ
ಹಿಂದಾಗಿದ್ದರೆ ಇನ್ನೂ ಸಮಯ ವಿರುವುದೆಂದು ನಿಧಾನವಾಗಿ ತಿಂಡಿ ತಿಂದು, ಕಾಫಿಯನ್ನು
ಹೀರಿ, ದುಡ್ಡನ್ನು ತೆತ್ತು ಹೊರಡುವರು. ಅವರಿಗೆ
ಬಸ್ಸು ಅಥವ ರೈಲು ಸಿಗದೇ ಹೋದರೇನಂತೆ
? ಅದಕ್ಕೆ ಹೋಟಲಿನವನು ಜವಾಬ್ದಾರನಲ್ಲವಲ್ಲ!
ಕಛೇರಿಯ ಗಡಿಯಾರದ ವಿಷಯದಲ್ಲೂ
ಇದೇರೀತಿ. ಬೆಳಗ್ಗೆ ಹಿಂದಾಗಿರುವ ಗಡಿಯಾರವು ಸಂಜೆಯ ವೇಳೆಗೆ ವೇಗಾವಾಗಿ
ಚಲಿಸಿದಲ್ಲಿ ನೌಕರರಿಗೆ ಲಾಭವಲ್ಲವೇ
?
ಈ ರೀತಿ ಸಂದರ್ಭಗಳನ್ನು
ಎಚ್ಚೆಸ್ಕೆಯವರು ಸುಲಲಿತವಾಗಿ ವಿಶ್ಲೇಷಿಸುವರು.
ಹೀಗೆ “ಗಡಿಯಾರ” ಪ್ರಬಂಧವು
ಎಲ್ಲ ಕಾಲಕ್ಕೂ ಓದಿಸಿಕೊಂಡು ಹೋಗುವ ಹಾಗೂ ಕಾಲ ಬದಲಾದಂತೆ ಓದುಗನ ಮೇಲೆ ವಿವಿಧ ರೀತಿಯ ಪ್ರಭಾವವನ್ನು
ಬೀರುತ್ತಾ ಸಾರ್ವಕಾಲಿಕ ಪ್ರಬಂಧವಾಗಿರುವುದು.
ಮೂಲ : ಎಚ್ಚೆಸ್ಕೆ
ಸಮಗ್ರ ಪ್ರಬಂಧಗಳು
No comments:
Post a Comment