ನಾಡೋಜ ಪ್ರೊ.ಕೆ.ಎಸ್.ನಿಸಾರ್
ಅಹಮದ್ ಅವರ 70 ಸಂವತ್ಸರಗಳನ್ನು ಪೂರೈಸಿ (2006) 71ರಲ್ಲಿ ಮುನ್ನಡೆದಿರುವ ಶುಭ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಸಪ್ತ ದಿಗ್ಗಜರಾದ ಪ್ರೊ.ಜಿ.ವೆಂಕಟಸುಬ್ಬಯ್ಯ, ಡಾ.ಡಿ.ಜವರೇ
ಗೌಡ, ಪ್ರೊ.ಎಚ್ಚೆಸ್ಕೆ, ವ್ಯಾಸರಾಯ ಬಲ್ಲಾಳ
ಹಾಗೂ ಡಾ.ಪ್ರಭುಶಂಕರ ಅವರುಗಳ ಸಂಪಾದಿತ ಆವೃತ್ತಿ, ಅಭಿನಂದನ
ಗ್ರಂಥ -“ನಿಸಾರ್ ನಿಮಗಿದೋ ನಮನ”. ಈ
ಗ್ರಂಥದಲ್ಲಿ ಕನ್ನಡ ಸಾಹಿತ್ಯದ ಮಹಾನ್ ಬರಹಗಾರರು, ಕವಿ-ವಿಮರ್ಶಕ-ಚಿಂತಕರ 212 ಲೇಖನಗಳನ್ನು 1783 ಪುಟಗಳಲ್ಲಿ ಸಂಗ್ರಹಿಸಲಾಗಿದೆ. ಈ
ಅಭಿನಂದನ ಗ್ರಂಥದಿಂದ ನನ್ನ ಅಚ್ಚುಮೆಚ್ಚಿನ ಪ್ರೊ.ಎಚ್ಚೆಸ್ಕೆ ಅವರ “ಕವಿ
ಮಿತ್ರರ ಅಚ್ಚುಮೆಚ್ಚಿನ ಕಾವ್ಯ”
ಎಂಬ ಲೇಖನದ ಬಗ್ಗೆ ಸಂಕ್ಷಿಪ್ತ ಪರಿಚಯವನ್ನು ಪ್ರಸ್ತುತಪಡಿಸಲು
ಸಂತೋಷವಾಗುವುದು.
ಕವಿ
ಮಿತ್ರರ ಅಚ್ಚುಮೆಚ್ಚಿನ ಕಾವ್ಯ
ಪ್ರೊ.ಎಚ್ಚೆಸ್ಕೆ
ಪ್ರೊ.ಕೆ.ಎಸ್.ನಿಸಾರ್
ಎಂದೊಡನೆ ನನ್ನ ಮನಸ್ಸು ಅರ್ಧ ಶತಮಾನಗಳ ಹಿಂದಕ್ಕೆ ಹೋಗುವುದು. ನಿಸಾರ್
ಅಹಮದ್ ಕವಿಯಾಗಿ, ಚಿಂತನಶೀಲರಾಗಿ, ಗದ್ಯಶಿಲ್ಪಿಯಾಗಿ, ಚತುರ
ಮಾತುಗಾರರಾಗಿ, ಸ್ನೇಹಜೀವಿಯಾಗಿ, ಸಂಘಟನಾ
ಕುಶಲರಾಗಿ ನಿರಂತರವಾಗಿ ವಿಕಾಸಗೊಳ್ಳುತ್ತಲೇ ಬಂದಿದ್ದಾರೆ. ಹೊಸತನವೇ
ಇವರ ಪ್ರತಿಭೆಯ ಬೀಸು.
1956ರರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ
ಜಿ.ಪಿ.ರಾಜರತ್ನಂ ಅವರು ಹೊಸ ಪ್ರತಿಭೆಯನ್ನು ಹುಡುಕುವ ಕಾರ್ಯದಲ್ಲಿ
ಮಗ್ನರಾಗಿದ್ದರು. ಇಂದು ವಿಶೇಷ ಖ್ಯಾತಿ ಗಳಿಸಿರುವ ಕವಿಗಳು ಆಗಿನ್ನೂ ವಿದ್ಯಾರ್ಥಿ
ವಿದ್ಯಾರ್ಥಿನಿಗಳು. ಅವರಲ್ಲಿ ಪ್ರೊ.ಕೆ.ಎಸ್.ನಿಸಾರ್
ಅಹಮದ್ ಒಬ್ಬರು. ಅವರು ಆಗ ಊದಿತೋದಿತ ಭೂ ವಿಜ್ಞಾನಿ.
ಅವರ ಭೂ ವಿಜ್ಞಾನಿಗೆ
ಸಹಜವೆನಿಸುವ ಚಿಂತನವನ್ನು ಈ ಕೆಳಗೆ ವೀಕ್ಷಿಸೋಣ:
“ನಿಮಿಷವೈದು ಕಳೆಯಲಿಲ್ಲ
ಬಂದು ನಾನು ಇಲ್ಲಿಗೆ;
ಕೊಡುತಲಿಹೆನೆ ಮಾರ್ದನಿಯನು
ನೈಸರ್ಗಿಕ ಸೊಲ್ಲಿಗೆ!
ಕಳೆದ ಕೋಟಿ ಕೋಟಿ ವರುಷ
ನನ್ಮ ಚುರುಕು ಕಣ್ಣಿಗೆ
ನನ್ಮ ಚುರುಕು ಕಣ್ಣಿಗೆ
ತೋರುತಿಹವು ಒಂದು ದಿವಸ-
ವಾಗಿ ಬಹಳ ಸಣ್ಣಗೆ!
ನನ್ನ ಭಾವದೊಳಗೆ ಅವಿತು
ಕುಣಿಯುತಿಹುದು ನಂದನ;
ಎಲ್ಲೆ ಇರದ ಮಹಾ ವಿಶ್ವ-
ವೆಲ್ಲ ಇಲ್ಲಿ ಬಂಧನ”
ಕಲ್ಪ ಕಲ್ಪವಳಿವ ಮುನ್ನ
ಲೋಹ, ನೀರು,
ಕಲ್ಲು,
ಚಿನ್ನ
- ಆಗ ಬರಿಯ ಧೂಮ, ಧೂಮ! ಆದರೆ
ಆ ಧೂಮದ ಮರೆಯಲ್ಲಿ ಅಡಗಿದ್ದ ಭೂಮ.
“ಜಡದ ಮಣ್ಣುಕಲ್ಲು ‘ಲಾವ’, ಸ್ಪರ್ಶ
ತಾಗಲೆಲ್ಲ ಜೀವ!” ಎಂಬುದನ್ನು ಕಂಡು ಬೆರಗು! ಆದರೆ
ಇದು ಬರಿ ಬೆಡಗಲ್ಲೋ ಅಣ್ಣಾ! ಎಂಬ ಎಚ್ಚರ. ಹೊಸ ಹೊಸ ಭಾವಗಳನ್ನು
ಸದಾ ಕಾಣುವ, ಕಟ್ಟುವ ಪ್ರಜ್ಞೆಯೂ ಇದ್ದಾಗ ಮಾತ್ರ ಪ್ರತಿಭೆ ಸಾರ್ಥಕವಾಗುತ್ತದೆ. ಅದು
ಮೂಲ ದ್ರವ್ಯ ಶಕ್ತಿ. ಅದರ ಜೊತೆಗೆ ನಿಪುಣತೆಯನ್ನೂ ಸಂಪಾದಿಸಿಕೊಳ್ಳಬೇಕು. ಲೋಕದ
ನಡವಳಿಕೆಯನ್ನು ಅರಿಯುವುದರ ಮೂಲಕ,
ಗ್ರಂಥ ವ್ಯಾಸಂಗ ಮಾಡುವುದರ ಮೂಲಕ ಬರುವಂಥದ್ದು ವ್ಯುತ್ಪತ್ತಿ. ಇವೆರಡಕ್ಕೂ
ಕೂಡಿದಂತೆ ಸತತ ಅಭ್ಯಾಸ. ಇವುಗಳಿಗೆ ನಿಸಾರ್ ಅಹಮದ್ ಅವರ ಸಾಹಿತ್ಯ ಒಂದು ನಿದರ್ಶನ. ಪ್ರತಿಭೆ, ವ್ಯುತ್ಪತ್ತಿ, ಅಭ್ಯಾಸಗಳ
ಹಿನ್ನೆಲೆಯಲ್ಲಿ ಪ್ರಜ್ಞೆಯೂ ಕೆಲಸ ಮಾಡುತ್ತಿರುತ್ತದೆ. ಹಿಂದೆ
ಆದದ್ದರ ನೆನಪು, ಈಗ ನಡೆಯುತ್ತಿರುವುದರ ಪರಿಶೀಲನೆ, ಮುಂದೆ
ಅಗಬಹುದಾದದ್ದನ್ನು ಕುರಿತ ಊಹೆ
- ಇವೆಲ್ಲವನ್ನೂ ಒಳಗೊಂಡಂತೆ ಕಾವ್ಯ
ಸೃಷ್ಟಿಯ ಕಾರ್ಯದಲ್ಲಿ ತೊಡಗಿದ ಕವಿಯ ಕೃತಿ ಸಾರ್ಥಕವೆನಿಸುತ್ತದೆ. ಇವೆಲ್ಲ
ಲಕ್ಷಣಗಳಿಂದ ಕೂಡಿದ್ದು ನಿಸಾರ್ ಅಹಮದ್ ಅವರ ಕಾವ್ಯಸೌಧ.
ಕಾವ್ಯ ರಚನೆಯ ಹಿಂದೆ
ವಿಮರ್ಶನ ಪ್ರಜ್ಞೆಯೂ ಇದ್ದಾಗಲೇ ಕವನದ ಸಾರ್ಥಕತೆ. ಇದಿಲ್ಲದಿದ್ದರೆ ಕವಿತೆ
ಕಾಲು ಮುರಿದುಕೊಳ್ಳುತ್ತದೆ, ಕೇವಲ ಭಾವಾವೇಶದ ಬುರುಗಾಗುತ್ತದೆ. ಸದಾ
ಬೆಳೆಯುತ್ತಲೇ ಇರುವ, ಹಚ್ಚ ಹಸುರಿನ ಗುಣವನ್ನು ಉಳಿಸಿಕೊಂಡಿರುವ ಕವಿ ನಿಸಾರ್ ಅಹಮದ್
ಅವರು ಕೂಡ ವಿಫುಲವಾಗಿ ಕಾವ್ಯ ರಚಿಸುವುದರ ಜೊತೆಗೆ ಗದ್ಯವನ್ನೂ ಯಥೇಚ್ಛವಾಗಿ ಬರೆಯುತ್ತಾ ಬಂದಿದ್ದಾರೆಂಬುದು
ಗಮನಿಸಬೇಕಾದ ಸಂಗತಿ.
“ಬಿತ್ತಿ ಬಿಸಿ ನೆತ್ತರನು ಕಾಗದದ ಭೂಮಿಯಲಿ ಸೃಷ್ಟಿಸಿದೆನಕ್ಷರಗಳೆಂಬ
ನರರನ್ನು!
ನಿಲ್ಲಿಸಿದೆನಲ್ಲಲ್ಲಿ
ಒಟ್ಟುಗೂಡಿಸಿ ಕೆಲರ, ಕರೆದೆ ‘ಪದ’ವೆನ್ನುತಾ ಗುಂಪಿನವರನ್ನು! ಕೂಡಿಸೀ ಗುಂಪುಗಳ
ಕವಿತೆಯೆಂದಿದ ಕರೆದು ಹಲರನಿಳಿಸಿದೆನಣ್ಣ ರಸವುಳ್ಳ
ಹಣ್ಣ!
ಬೇರೆ
ಜನರದು ಬೇರೆ ಗಟ್ಟಿ ಗುಂಪಿರಬಹುದು;
ಅವರ
ಜೊತೆಗಿವರೂನೆ ಇರಲಿ, ಬಿಡಿರಣ್ಣ!”
ಎನ್ನುತ್ತಾ ಕಾವ್ಯ
ಕ್ಷೇತ್ರವನ್ನು ಪ್ರವೇಶಿಸಿದ ನಿಸಾರ್ ಅಹಮದ್ ನಡೆದುಬಂದ ದಾರಿಯತ್ತ ಎಂದೂ ಕಣ್ಣು ಹೊರಳಿಸಿದವರಲ್ಲ. ಯಾವುದೇ
ಪಂಥಕ್ಕೆ ಇವರು ಕಟ್ಟಿಕೊಂಡವರಲ್ಲ.
ನವ್ಯವೋ, ನವೋದಯವೋ, ನವ್ಯೋತ್ತರವೋ, ಯಾರು
ಏನೇ ಹೇಳಲಿ, ಅಂತೂ ಬರೆದದ್ದು ಅಪ್ಪಟ ಕಾವ್ಯವಾಗಿರಬೇಕು.
ನಿಸಾರ್ ಅಹಮದ್ ಅವರು
ಕಾವ್ಯ ರಚನೆಯಲ್ಲಿ ತೊಡಗಿದಾಗ ಕನ್ನಡದಲ್ಲಿ ನವ್ಯಕಾವ್ಯ ಪ್ರಕಾರ ಆರಂಭವಾಗಿತ್ತು. ಇತರ
ನವ್ಯ ಕವಿಗಳಲ್ಲಿ ಇರದಿದ್ದ ಒಂದು ಬಗೆಯ ಸರಳತೆ, “ಏಳುಸುತ್ತಿನ ಕೋಟೆ”ಯಲ್ಲಿ
ಹುದುಗಿಕೊಳ್ಳದ ಪ್ರವೃತ್ತಿ, ಸ್ನೇಹಪ್ರಿಯತೆ, ವಯಸ್ಸಿಗೆ
ಮೀರಿದ ಆತ್ಮವಿಶ್ವಾಸ, ಆದರೂ ಎಲ್ಲ ಅನುಭವಗಳಿಗೂ ತಮ್ಮನ್ನು ತೆರೆದುಕೊಳ್ಳುವ ಗುಣ - ಇವುಗಳಿಂದ
ನಿಸಾರ್ ಅಹಮದ್ ಎಲ್ಲರಿಗೂ ಪ್ರಿಯ.
ನಿಸಾರ್ ಅಹಮದ್ ಅವರದ್ದು
ಪಾರದರ್ಶಕ ಮಾತು, ಬದುಕು,
ಅನಿಸಿದ್ದನ್ನು ನೇರವಾಗಿ ಅಂದುಬಿಡುವ ಗುಣ. ಅವರ
ಕಾವ್ಯದಲ್ಲೂ ಒಂದು ರೀತಿಯಲ್ಲಿ ಬೆಚ್ಚಿಬೀಳಿಸುವ, ಆದರೆ ಹೊಚ್ಚ ಹೊಸದಾದ
ಚಿತ್ರವೊಂದನ್ನು ಕಟ್ಟಿಕೊಡುವ ಸಾಮರ್ಥ್ಯ.
ಉರ್ದು-
ಮನೆ ಮಾತಾದ ನಿಸಾರ್ ಅಹಮದರಿಗೆ ಉರ್ದು, ಕನ್ನಡ
ಎರಡೂ ನಡುಮನೆ-ಅಡಿಗೆಮನೆ ಇದ್ದ ಹಾಗೆ. ತಮ್ಮದಲ್ಲದ್ದು
ಎನ್ನಬಹುದಾದ ಸಂಸ್ಕೃತಿಯನ್ನು ಅದ್ಭುತ ಎನಿಸುವಂತೆ ಇವರು ಅರಗಿಸಿಕೊಂಡಿದ್ದಾರೆ. ಅನ್ಯ
ಸಂಸ್ಕೃತಿಯ, ಅನ್ಯ ಭಾಷೆಯ ಪದಗಳನ್ನು ಇನ್ನೊಂದು ಸಂಸ್ಕೃತಿಯ ಅನುಭವದ ಅಭಿವ್ಯಕ್ತಿಗೆ
ಅವರು ದುಡಿಸಿಕೊಂಡಿದ್ದಾರೆ. “ಖಾಲಿ ಸೈಟುಗಳು” ಎಂಬ
ಕವನದ ತುಂಬಾ ಈ ಲಕ್ಷಣವು ಮಿನಿಗುತ್ತದೆ.
ಸಾಮಾನ್ಯವಾಗಿ ಬಳಸುವ ಮಾತುಗಳ ಬೆಂಗಡೆಯಲ್ಲಿ ಅವಿತು ಕುಳಿತ
ಸತ್ಯ ಈ ಮಾತುಗಳ ಸಂದಿನಿಂದ ಹೊರಬಿದ್ದು ಓದುಗರ ಕಣ್ಣನ್ನು ಕೋರೈಸುತ್ತದೆ. ಈ
ಸಾಲುಗಳನ್ನು ಗಮನಿಸಿ :
“ನಮ್ಮಂತರಾಳಗಳ ಲೇಔಟುಗಳಲ್ಲು
ಇವೆ
ಖಾಲಿ
ಸೈಟುಗಳು;
ಅಲ್ಲಿ
ಅಕ್ರಮವಾಗಿ ತಳವೂರಿವೆ;
ಅಟ್ಟಲಾಗದ
ಕಠೋರ ನೆನಹುಗಳು
ಗಿಜಿಗುಡುವ
ಬಡ ಕುಟೀರಗಳು,
ಹಳೆ
ಹತಾಶೆಗಳ ಗಟಾರದಂಚಿನ ನಾರುವ ಒಠಾರಗಳು
ವಿಷಾದದ
ಆಗುಹೋಗುಗಳು;
ಮಾ
ನಿಷಾದದ ವ್ಯರ್ಥ ಕೂಗುಗಳು”
ನಗರಗಳ ನಡುವಿನ ಖಾಲಿ
ಸೈಟುಗಳ ವರ್ಣನೆಯಿಂದ ಆರಂಭವಾಗುವ ಈ ಕವನ ಕ್ರಮೇಣ ಅಸಾಧಾರಣವಾದ ಶಕ್ತಿ ತುಂಬಿಕೊಂಡು ಸಂಕೀರ್ಣವಾಗಿ
ಬೆಳೆದು, ಪ್ರತಿಮೆಯಾಗಿ ಪರಿಣಮಿಸಿ, ಹಲವು
ಮುಖಿಯಾಗಿ, ಅಕರಾಳವಿಕರಾಳವೂ ಆಗಿ ಘೂರ್ಣಿಸುತ್ತದೆ. ಹೊರಮನೆ-ಒಳಮನೆಗಳ
ಭಾಷೆ, ಸಂಸ್ಕೃತಿಗಳ ಜೊತೆಗೆ ಇಂಗ್ಲೀಷಿನ ಪ್ರಜ್ಞೆಯನ್ನು ಕೂಡಿಸಿಕೊಂಡು
ಸಾಗುವ ಈ ಕವಿತೆ ಇಂದಿನ ಜೀವನದ ಸಂಕೀರ್ಣತೆಯನ್ನು ಸರಳವಾದ ರೀತಿಯಲ್ಲೇ ಅತ್ಯಂತ ಯಶಸ್ವಿಯಾಗಿ ಅಭಿವ್ಯಕ್ತಿಸುತ್ತದೆ. ಎರಡು
ಜಗತ್ತುಗಳನ್ನು ಜಂಟಿ
ಮಾಡಿ ಕಸಿ ಮಾಡಿದಂತಿರುವ ಅವರ ವಿಶಿಷ್ಟ ಶೈಲಿಯ ಮೋಡಿ ಓದುಗರ ಮೈಮರೆಸುತ್ತದೆ, ಮನಸ್ಸನ್ನು
ಬೇರಾವುದೋ ಲೋಕಕ್ಕೆ ಕರೆದೊಯ್ಯುತ್ತದೆ.
ಈ ದೃಷ್ಟಿಯಿಂದ ನಿಸಾರರ ಕವಿತೆ ಅನನ್ಯ ಗುಣಲಕ್ಷಣವುಳ್ಳದ್ದು.
ಭಾರತದ್ದು ಸರ್ವಧರ್ಮಗಳನ್ನು, ಸಂಸ್ಕೃತಿಗಳನ್ನು
ಸಮಾನವಾಗಿ ಕಾಣುವ, ಪೋಷಿಸುವ ಆದರ್ಶ; ಎಲ್ಲ
ಒಳ್ಳೆಯ ಭಾವನೆಗಳ ತೊಟ್ಟಿಲು. ಇಲ್ಲೇ ಬಾಳುವೆ ಮಾಡುತ್ತೇನೆ. ಯಾರೂ
ನಮ್ಮನ್ನು ಸವತಿ ಮಕ್ಕಳಂತೆ ಕಾಣಬಾರದು ಎಂಬದನ್ನು ಅಭಿವ್ಯಕ್ತಿಸುವ “ಸವತಿ
ಮಕ್ಕಳ ಹಾಗೆ” ಕವನ ಗಮನಾರ್ಹ :
“ಬೆಳಕು ಕಂಡೆವು ಇಲ್ಲೆ,
ಬಾಡಿ
ಬೀಳುವೆವಿಲ್ಲೆ,
ಏನಾಟ
ನಡೆದರೂ ನಿನ್ನಡಿಯ ಗಡಿಯಲ್ಲೆ,
ಮರಳಂತೆ
ಸಣ್ಣಾಗಿ ಬಾಳ್ದೊರೆಯ ತಡಿಯಲ್ಲೆ
ಸುಡು
ಬಿಸಿಲನುಂಡರೂ,
ಕೈನೀಡಿನೆಡೆಯಲ್ಲೆ
ಹರಿದ
ನೀರನು ಕಂಡು, ನೀರಡಿಕೆ ಉಲ್ಬಣಿಸಿ,
ನಿನ್ನ
ಹಳಿಯುವ ಖೋಡಿ ತಿಳಿಗೇಡಿಗಳ ಹರಸಿ-
ತೆಗೆದುಕೋ
ಇವರನ್ನೂ ಲೆಕ್ಕಕ್ಕೆ ತಾಯೆ,
ಪರದೆಯೆಳಿ,
ಇವರೆದೆಯ
ದುಃಖಕ್ಕೆ ತಾಯೆ,
ಸವತಿ
ಮಕ್ಕಳ ಹಾಗೆ ಕಾಣಬೇಡವ್ವ,
ಸವತಿ
ಮಕ್ಕಳ ಹಾಗೆ ಕಾಡಬೇಡ.”
ಈ
ಕವನದ ಅರ್ತತೆ, ತಾಯಿನಾಡಲ್ಲದೆ ಅನ್ಯಥಾ ಶರಣಂ ನಾಸ್ತಿ ಎಂಬ ಭಾವ ಇಲ್ಲಿ ಕೋಡಿವರಿದಿದೆ. “ತಂದೆ
ತಾಯಿ ನೀನು, ಬಂಧು ಬಳಗ ನೀನು. ನೀನಲ್ಲದೆ
ಮತ್ತಾರು ಇಲ್ಲವಯ್ಯಾ, ಕೂಡಲಸಂಗಮದೇವಾ, ಹಾಲಲ್ಲಾದರೂ
ಹಾಕು ನೀರಲ್ಲಾದರೂ ಹಾಕು” ಎಂಬ ಕೂಡಲಸಂಗಮದೇವ ಬಸವಣ್ಣನವರ ವಚನದ ನೆನಪಾಗುತ್ತದೆ. ಇಲ್ಲಿ
ಕವಿಯು ಎಲ್ಲ ಕಳವಳಗಳನ್ನೂ ಕಳೆದುಕೊಂಡು,
ಉಭಯ ಸಂಕಟದಿಂದ ಪಾರಾಗಿ ಸಮಾಧಾನಚಿತ್ತವನ್ನು ತಳೆಯುತ್ತಾನೆ. ಎಲ್ಲ
ತರತಮಗಳಿಂದ, ಭಿನ್ನ ಭೇದಗಳಿಂದ ಮೇಲೆದ್ದು ನಿಲ್ಲುವನು.
“ಕುರಿಗಳು, ಸಾರ್ ಕುರಿಗಳು” ಎಂಬ
ಸಮಾಜ ವಿಡಂಬನೆ, “ಅಮ್ಮ,
ಆಚಾರ,
ನಾನು”
ಎಂಬ ಕಂದಾಚಾರದ ಲೇವಡಿ, ಇವೆಲ್ಲ
ಮಜಲುಗಳನ್ನೂ ದಾಟಿ ನಡೆದ ಕವಿ,
“ವಾಸ್ತವಿಕ” ದೃಷ್ಟಿಯನ್ನು
ತಳೆಯುವ ಮಟ್ಟಿಗೆ ಬೆಳೆದುಬಿಟ್ಟಿದ್ದಾರೆ
:
“ಕಳಚಿ ಒಂದೊಂದೇ;
ಕನ್ನಡಕ,
ಗಡಿಯಾರ,
ಚೈನು,
ಕೆರ,
ಪೋಷಾಕು-
ದಿಗಂಬರತೆ
ವಾಸ್ತವಿಕ.
ಕಳಚಿ
ದೇಶ,
ಸಮಾಜ,
ಧರ್ಮ,
ಮತವರ್ಗಗಳ,
ನಿರ್ಮಮತೆ
ವಾಸ್ತವಿಕ.
ನಿಲ್ಲಿ,
ಹುಟ್ಟಿದ
ಹಾಗೆ ಗೊಮ್ಮಟನನುಕರಿಸಿ,
ನೋಡಿ
ಕನ್ನಡಿಯಲ್ಲಿ ನಿಮ್ಮ ಮುಖ;
ಚರ್ಮ
ಚಕ್ಕಳ ಮಾಂಸದಾಚೆ ಕಾಣದ
ಪ್ರಾಣ
ಅದರರಿವೆ
ವಾಸ್ತವಿಕ.”
(ವಾಸ್ತವಿಕ)
ಸಾಹಿತ್ಯದಿಂದ ಸುಸಂಸ್ಕೃತ
ವಾಚಕನಿಗೆ ಆದ್ಯತಃ ಲಭ್ಯವಾಗಬೇಕಾದ್ದು ಏನೆಂದರೆ ಮನೋರಂಜನೆಯ ನಲಿವು, ಬುದ್ಧಿ
ಪ್ರಚೋದನೆಯ ತಿಳಿವು. ಮಿಕ್ಕಿದ್ದೇನಿದ್ದರೂ ಆಮೇಲೆ ಎಂದು ನಂಬಿರುವ, ಅಂತೆಯೇ
ನಲಿವು ತಿಳಿವುಗಳನ್ನು ಹಾಳತವಾಗಿ ಬೆರೆಸಿ ಸಾದರಪಡಿಸುತ್ತಿರುವ ಈ ಕವಿಯ ಕಾವ್ಯವೂ ಗದ್ಯವೂ ಹೃದ್ಯವೂ
ಮಾನವೀಯವೂ ಆಗುವುದರಲ್ಲಿ ಆಶ್ಚರ್ಯವೇನಿಲ್ಲ.
ವಯಸ್ಸಿನಿಂದಾಗಿ ಹಿಮ್ಮೆಟ್ಟದ ಉತ್ಸಾಹ, ಅನಾರೋಗ್ಯದಿಂದಾಗಿ
ಕಂಗೆಡದ ವರ್ಚಸ್ಸು, ಜೀವನದಲ್ಲಿ ಅಪಾರವಾದ ಪ್ರೀತಿ, ಕಾವ್ಯಶಾಸ್ತ್ರ
ವಿನೋದಗಳಲ್ಲೂ, ಸಮಾಜ ಪರಿಷ್ಕರಣ ಕಾರ್ಯದಲ್ಲೂ, ಸಂಸ್ಕೃತಿ
ಸಹೃದಯತೆಗಳನ್ನು ಹಂಚುವ ಕಾರ್ಯದಲ್ಲೂ,
ನಿರತವಾದ ಮನಸ್ಸು - ಈ
ಗುಣಗಳಿಂದಾಗಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಎಲ್ಲರಿಗೂ ತುಂಬಾ ಅಚ್ಚುಮೆಚ್ಚು.
No comments:
Post a Comment