Thursday, March 7, 2019

ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದ ಒಂದು ಅದ್ಭುತ ಎಚ್ಚೆಸ್ಕೆ


ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದ ಒಂದು ಅದ್ಭುತ ಎಚ್ಚೆಸ್ಕೆ

ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಅದ್ಭುತಗಳನ್ನು ಗುರುತಿಸಬಹುದು. ಅವುಗಳಲ್ಲಿ ಪ್ರೊ.ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್ ಜನಪ್ರಿಯ ಸಾಹಿತಿ. ಅವರ ಮಾತೃಭಾಷೆ ತಮಿಳು; ಓದಿದ್ದು ವಾಣಿಜ್ಯ ಶಾಸ್ತ್ರ. ತಮ್ಮ ಸೃಜನಶೀಲ ಸಾಮರ್ಥ್ಯವನ್ನು ಅಭಿವ್ಯಕ್ತಿಗೊಳಿಸಿಕೊಳ್ಳಲು ಆರಿಸಿಕೊಂಡದ್ದು ಕನ್ನಡ ಭಾಷೆ ಹಾಗೂ ಸಾಹಿತ್ಯ. ಕನ್ನಡ ಸಾಹಿತ್ಯವನ್ನು ಕಾದಂಬರಿ, ಕತೆ, ಕವಿತೆ, ಅಂಕಣ, ನಾಟಕ, ಜೀವನ ಚರಿತ್ರೆ, ಪ್ರಬಂಧ, ಹಾಗೂ ಚುಟುಕಗಳನ್ನು ರಚಿಸುವುದರಿಂದ ಶ್ರೀಮಂತಗೊಳಿಸಿದ್ದಾರೆ. ಅವರು ಸಾಹಿತಿಯಷ್ಟೇ ಅಲ್ಲದೆ ಉತ್ತಮ ವಾಗ್ಮಿಗಳೂ ಕೂಡ.

ಭ್ರಷ್ಟಾಚಾರ, ಅನಾಚಾರಗಳಿಂದ ತುಂಬಿರುವ ಸಮಾಜದಲ್ಲಿ ಎಂತಹ ಸಂದರ್ಭದಲ್ಲೂ, ಎದೆಗುಂದದ ಪರಿಸ್ಥಿತಿಯಲ್ಲಿಯೂ, ಸಮಚಿತ್ತತೆಯನ್ನು ಕಳೆದುಕೊಳ್ಳದ ಸಮದರ್ಶಿ ಯಾರಾದರೂ ಇದ್ದಲ್ಲಿ ಅವರು ಕೇವಲ ಪ್ರೊ.ಕೃಷ್ಣಸ್ವಾಮಿ ಅಯ್ಯಂಗಾರ್ ಮಾತ್ರ.

ಅವರ ಸಾರ್ವಕಾಲಿಕ, ಸಕಾಲಿಕ, ಸಮೃದ್ಧ ಜೀವಕಳೆ ತುಂಬಿ ತುಳುಕುವ ಅಂಕಣ ಲೇಖನಗಳು ನಮ್ಮೆಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದೆ. ಭಾವನೆ, ಶ್ರದ್ಧೆ, ನಂಬಿಕೆ, ಉಪಾಸನೆ, ಸಂಪ್ರದಾಯ, ಶೋಧನೆ-ಸಂಶೋಧನೆಗಳು ಅಧ್ಯಯನನಿಷ್ಠರನ್ನು, ಸಂಶೋಧಕರನ್ನು ವಿಶೇಷ ಮಾಹಿತಿಯೊಂದಿಗೆ ಯಶಸ್ಸಿನ ಪಥದಲ್ಲಿ ಮುನ್ನಡೆಸುವುದು.

ಸಾಹಿತ್ಯಕ್ಷೇತ್ರದ ಸಂತ ಎಂಬ ಅಭಿವಂದನೆಗೆ ಪಾತ್ರರಾಗಿರುವ ಎಚ್ಚೆಸ್ಕೆ ಅಮೃತಬಿಂದುಗಳ ಸೃಷ್ಟಿಕರ್ತ. ಶಬ್ದಜಾಲಗಳನ್ನು ಅತಿ ಸುಂದರವಾಗಿ ನವಿರಾಗಿ ಸೂಕ್ಷ್ಮವಾಗಿ ರೋಮಾಂಚನಗೊಳ್ಳುವಂತೆ ನಿರ್ಮಿಸುವ ಸೃಷ್ಟಿಕರ್ತ.

ಭ್ರಮನಿರಸನಗೊಂಡ ಅತೃಪ್ತ ಜೀವಿಗಳಿಗೆ ಅಮೃತ ಚೇತನ ನೀಡುವ ಸಮೃದ್ಧ ಪ್ರೀತಿಯ ಚಿಲುಮೆ ಪ್ರೊ.ಎಚ್ಚೆಸ್ಕೆ.

ಇಪ್ಪತ್ತನೇ ಶತಮಾನದ ಸೃಜನಶೀಲ ಸಾಹಿತಿಗಳ ಅಗ್ರ ಪಂಕ್ತಿಯಲ್ಲಿ ಎದ್ದು ಕಾಣುವ ಸಾಹಿತಿ ಡಾ.ಎಚ್ಚೆಸ್ಕೆ. ಅಂಕಣ ಕ್ಷೇತ್ರಕ್ಕೆ ಹೊಸ ನೆಲೆ ಹಾಗೂ ಬೆಲೆಯನ್ನು ತಂದು ಕೊಟ್ಟ ಹರಿಕಾರ.

ಉತ್ಪ್ರೇಕ್ಷೆಯಿಲ್ಲದ, ಉದ್ವೇಗವಿಲ್ಲದ, ತಪ್ಪುದಾರಿಗೆ ಎಂದಿಗೂ ಇಳಿಯದ, ಚಿಂತನೆಗೆ ಈಡುಮಾಡುವ ಲೇಖನಗಳಿಂದ ಸಾಹಿತ್ಯಕ್ಷೇತ್ರದಲ್ಲಿ ಸದಾ ಅನ್ವೇಷಣೆ ನಡೆಸುತ್ತಾ ಇದ್ದ ಸಾತ್ವಿಕ ಬದುಕನ್ನು ನಡೆಸಿದ ಸಾಹಿತ್ಯಕ್ಷೇತ್ರದ ಸಂತ, ಶಿಲ್ಪಿ ಡಾ.ಎಚ್ಚೆಸ್ಕೆ.

ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ.ಎಚ್ಚೆಸ್ಕೆ ಅವರ ಅನೇಕ ಕೃತಿಗಳಲ್ಲಿ ಕೆಲವನ್ನು ಈ ಕೆಳಗೆ ಸ್ಮರಿಸಿಕೊಳ್ಳಲು ಇಚ್ಛಿಸುವೆ:

1.    ಚೆಂಡು ಹೂ ಗೊಂಡೆ
2.    ದೇವ ಜೀವ ಜಗತ್ತು

ಇವಲ್ಲದೇ ಅವರ ಅನೇಕ ಬರಹಗಳನ್ನು ಡಾ.ಎಂ.ಜಿ.ಆರ್.ಅರಸ್ ಅವರು ಈ ಕೆಳಗಿನ ಕೃತಿಗಳಡಿಯಲ್ಲಿ ಸಂಪಾದಿಸಿ, ತಮ್ಮದೇ ಪ್ರಕಾಶನ ಸಂಸ್ಥೆಯಾದವೈದ್ಯವಾರ್ತಾ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ :

1.    ಎಚ್ಚೆಸ್ಕೆ ಚುಟುಕಗಳು
2.    ಎಚ್ಚೆಸ್ಕೆ ೮೫
3.    ಎಚ್ಚೆಸ್ಕೆ ಬರಹಗಳಲ್ಲಿ ಕುವೆಂಪು
4.    ಎಚ್ಚೆಸ್ಕೆ ಆಯ್ದ ಬರಹಗಳು
5.    ಎಚ್ಚೆಸ್ಕೆ ಚುಟುಕು ದರ್ಶನ
6.    ಎಚ್ಚೆಸ್ಕೆ ಸಮಗ್ರ ಪ್ರಬಂಧಗಳು

ಈ ಕೃತಿಗಳಲ್ಲಿ ಕಡೆಯದಾದಎಚ್ಚೆಸ್ಕೆ ಸಮಗ್ರ ಪ್ರಬಂಧಗಳುಪುಸ್ತಕದ ಬಗ್ಗೆ ಕೆಲವು ಅನಿಸಿಕೆಗಳನ್ನು ಈ ಕೆಳಗೆ ಪ್ರಸ್ತುತಪಡಿಸಲು ಇಚ್ಛಿಸುತ್ತೇನೆ.

ಎಚ್ಚೆಸ್ಕೆ ಸಮಗ್ರ ಪ್ರಬಂಧಗಳುಕೃತಿಯು ಪ್ರೊ.ಎಚ್ಚೆಸ್ಕೆ ಅವರ ೮೯ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ (2008) ಹೊರಬಂದಿತು.

ಲಲಿತ ಪ್ರಬಂಧಗಳ ರಚನೆಯಲ್ಲಿ ಬುದ್ಧಿ, ಅನುಭವ, ಚಿಂತನೆಗಳು ಪ್ರಧಾನವಾದರೂ, ಕೆಲವೆಡೆ ಭಾವದ ಮಿಂಚು ಅಗತ್ಯ. ಅಲೋಚನಾನುಭವಗಳನ್ನು ಓದುಗನ ಹೃದಯ ಹಾಗೂ ಮನಸ್ಸಿಗೆ ಮುಟ್ಟಿಸುವುದಲ್ಲದೆ, ಅವನಲ್ಲಿ ಹೊಸ ಭಾವನೆಗಳನ್ನು ಹುಟ್ಟಿಸುವಂತಿರಬೇಕು. ಕೇಂದ್ರ ವಿಷಯವನ್ನು ಪುಷ್ಟೀಕರಿಸದ ಹಾಗೂ ಅದಕ್ಕೆ ಸಂಬಂಧವಿಲ್ಲದ ಪ್ರಸಂಗಗಳನ್ನು ತುರುಕುವ ಚಪಲತೆಯು ಆರೋಗ್ಯಕರವಲ್ಲ.

ಲಲಿತಪ್ರಬಂಧಗಳ ಮೂಲ ಲಕ್ಷಣಗಳನ್ನು ಉಳಿಸಿಕೊಂಡು ಬರೆಯುತ್ತಿರುವವರು ಬಹಳ ವಿರಳ. ಲಲಿತ ಪ್ರಬಂಧಗಳಿಗೆ ಬೇಕಾಗುವ ಗುಣಗಳು - ಹದ, ಸಜ್ಜನಿಕೆ, ಅನುಕಂಪ ದೃಷ್ಟಿ, ಆಳವಾದ ವ್ಯಾಸಂಗ, ವೈವಿಧ್ಯಮಯ ಆಸಕ್ತಿ, ಮೃದು ಹಾಸ್ಯ, ಕಾವ್ಯ ಮನೋಧರ್ಮ, ಕಥನ ಕೌಶಲ, ನಾಟಕೀಯ ಲಕ್ಷಣ, ಸಂಭಾಷಣಾ ಚಾತುರ್ಯ, ಚಿಂತನಶೀಲತೆ, ಭಾಷೆಯೊಂದಿಗೆ ಸರಸ, ಸ್ನೇಹಪ್ರಿಯತೆ, ಪ್ರತಿಭೆಪ್ರಜ್ಞೆಗಳ ಸಮನ್ವಯ.

ಒಂದು ಒಳ್ಳೆಯ ಲಲಿತಪ್ರಬಂಧ ಅದರ ಲೇಖಕನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಅವನ ವ್ಯಕ್ತಿತ್ವ ಎಷ್ಟು ವಿಶಿಷ್ಟವೋ ಅವನ ಪ್ರಬಂಧವೂ ಅಷ್ಟೇ ಸಾರ್ಥಕ. ಅದರಲ್ಲಿ ಅವನ ಒಲವು, ನಿಲುವು, ಪೂರ್ವಾಗ್ರಹಗಳು ಎಲ್ಲವೂ ಬೆರೆತು ಬರುತ್ತದೆ. ಲೋಕಾಭಿರಾಮದ ಮಾತು, ಸಂಭಾಷಣೆ, ವಾದಸರಣಿ, ವರ್ಣನೆ, ನಿರೂಪಣೆ ಇವೆಲ್ಲವೂ ಮೃದು ಹಾಸ್ಯದೊಡನೆ ಬೆರೆತಿರುತ್ತದೆ.

ವಿಶ್ವದಲ್ಲಿದ್ದ ಒಳ್ಳೆಯ ವಸ್ತುಗಳನ್ನೆಲ್ಲಾ ಸ್ವಲ್ಪ ಸ್ವಲ್ಪವಾಗಿ ಆಯ್ದುಕೊಂಡು ಸೃಷ್ಟಿಸಲಾದ ತಿಲೋತ್ತಮೆಯ ವಂಶಕ್ಕೆ ಸೇರುವುದು ಲಲಿತ ಪ್ರಬಂಧ.

ಲಲಿತ ಪ್ರಬಂಧದ ಮತ್ತೊಂದು ಲಕ್ಷಣವೆಂದರೆ ಚಲನಶೀಲತೆ. ಹರಿಯುವ ನೀರಿನಂತೆ ಅದರದು ನಿರಂತರ ಚಲನೆ. ಚಲನೆ ಇಲ್ಲದ್ದು ಸ್ಥಿರ ಹಾಗೂ ಅದು ಶಾಶ್ವತ ಎಂಬುದು ಕೆಲವರ ಭಾವನೆ. ಆದರೆ ಚಲನೆಯೇ ಸ್ಥಿರ, ಶಾಶ್ವತ. ಆದ್ದರಿಂದಲೇ ಬಸವಣ್ಣನವರು, “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲಎಂದು ಹೇಳಿರುವರು.

ಲಲಿತ ಪ್ರಬಂಧ ವಿರಳವಾದರೂ ಅದಕ್ಕೆ ಅಳಿವಿಲ್ಲ. ಅದು ಪಾರಿಜಾತ ಕುಸುಮದಂತೆ ಸುಕುಮಾರ, ಸುವಾಸನೆಯುಳ್ಳದ್ದು.

ಲಲಿತ ಪ್ರಬಂಧಗಳಲ್ಲಿ ನಾನಾ ಪ್ರಾಕಾರಗಳುಂಟು. ಹಠಾತ್ತಾಗಿ ಮೂಡಿ ಅನಿರೀಕ್ಷಿತವಾಗಿ ಮುಗಿದುಬಿಡುವುದು, ಇತರರೊಂದಿಗೆ ವಾದಮಾಡುವುದು, ಓದುಗರ ಮುಂದೆ ಹೊಸ ಹಾಗೂ ವಿಚಿತ್ರವೆಂದು ತೋರುವ ವಾದವನ್ನು ಮಂಡಿಸುವುದು.

ಕೈಲಾಸಂ ಒಂದೆಡೆ ಪ್ರಾಮಾಣಿಕ ಕವಿಯು ಏನನ್ನು ಬಯಸುವನು ಎಂಬುದರ ಬಗ್ಗೆ ಹೀಗೆ ಹೇಳಿರುವರು :
ಕವಿ ಬಯಸುವ ಬಹುಮಾನ ಚಿನ್ನವಲ್ಲ, ಬಿರುದುಗಳಲ್ಲ, ಅಮೃತಶಿಲೆಯಲ್ಲಿ ತನ್ನ ಮೂರ್ತಿಯನ್ನು ಕಡೆದು ನಿಲ್ಲಿಸಬೇಕೆಂಬ ಬಯಕೆಯೂ ಅಲ್ಲ, ಅಧಿಕಾರ, ಅಂತಸ್ತು, ಸಂಪತ್ತು, ಪ್ರಭಾವಗಳನ್ನಂತೂ ಅಲ್ಲವೇ ಅಲ್ಲ. ಯುವಕರಿರಲಿ, ಮುದುಕರಿರಲಿ ಅವರೊಂದು ಕಣ್ಣೀರಿನ ಹನಿ ಉದುರಿಸಿದರೆ, ಕಿರುನಗೆ ಬೀರಿದರೆ ಅಷ್ಟೇ ಸಾಕು. ನಮ್ರನಾಗಿ ನಾನು ಅವರಿಂದ ಯಾಚಿಸುವ ಪುರಸ್ಕಾರ, ಪಾರಿತೋಷಿಕ ಇಷ್ಟೇ.” ಈ ಹೇಳಿಕೆ ಎಚ್ಚೆಸ್ಕೆ ಅವರಿಗೆ ಸೂಕ್ತವಾಗಿ ಹೊಂದುವುದು.

ಈ ಹಿನ್ನೆಲೆಯಲ್ಲಿ ಎಚ್ಚೆಸ್ಕೆಯವರ ಪ್ರಬಂಧಗಳನ್ನು ವೀಕ್ಷಿಸಿದ ಯಾರಿಗಾದರೂ ಹೆಮ್ಮೆಯಾಗದೇ ಇರಲಾರದು. ಎಚ್ಚೆಸ್ಕೆ ಎಂದರೆನಡೆದಾಡುವ ವಿಶ್ವಕೋಶಎಂದೇ ಪ್ರಸಿದ್ಧರಾದವರು. ಅವರ ವ್ಯಾಸಂಗದ ವಿಸ್ತಾರ ವೈವಿಧ್ಯಗಳು ಹಾಗೂ ಅವರ ಸ್ಮೃತಿಶಕ್ತಿಗೆ ಅವರ ಪ್ರಬಂಧಗಳೇ ನಿದರ್ಶನ. ಅವರು ಉದಾಹರಿಸುವ ನಿದರ್ಶನಗಳಿಂದ ಅವರು ಸಂಸ್ಕೃತ, ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳನ್ನು ಆಮೂಲಾಗ್ರವಾಗಿ ಅಭ್ಯಾಸ ಮಾಡಿರುವುದು ಕಂಡುಬರುತ್ತದೆ.

ಡಾ.ಎಚ್ಚೆಸ್ಕೆ ಸಮಗ್ರ ಪ್ರಬಂಧಗಳುಸಂಕಲನದಲ್ಲಿ ನೂರಾರಲ್ಲ ನೂರೈವತ್ತೊಂಬತ್ತು ಪ್ರಬಂಧಗಳಿವೆ. ಎಲ್ಲ ಪ್ರಬಂಧಗಳನ್ನೂ ಎಚ್ಚೆಸ್ಕೆ ಅವರು ರಚಿಸಿದ ಸಂವತ್ಸರಗಳಡಿಯಲ್ಲಿ ಒಂದೊಂದು ಶೀರ್ಷಿಕೆಯಡಿಯಲ್ಲಿ ಈ ಕೆಳಗಿನಂತೆ ವಿಂಗಡಿಸಲಾಗಿದೆ :-
         ವರ್ಷ   ಶೀರ್ಷಿಕೆ         ಸಂಖ್ಯೆಗಳು
1.    1958 - ಕಳ್ಳ ಹೊಕ್ಕ ಮನೆ      15
2.    1962 - ಜೇಡನ ಬಲೆ           19
3.    1979 - ಸುರಹೊನ್ನೆ            12
4.    1980 - ಚಂದ್ರಕಾಂತಿ          12
5.    1989 - ಮೇಘಲಹರಿ           12
6.    1996 - ಮಿಂಚಿನ ಹುಡಿ        46
7.    2001 - ಜೀವರಸಮೀಮಾಂಸೆ 12
8.    2003 - ಮೋಡದ ಮಾಯೆ    16
9.    2007 - ಚೆಂಡು ಹೂ ಗೊಂಡೆ  15
   ಒಟ್ಟು ಪ್ರಬಂಧಗಳ ಸಂಖ್ಯೆ 159

ಯಾವುದೇ ಒಂದು ಕೃತಿಯನ್ನು ಅದು ರಚಿಸಿದ ಸಮಯದಲ್ಲಿ ಓದಿದಾಗ ಓದುಗನ ಮನದಲ್ಲಿ ಮೂಡುವ ಪ್ರತಿಕ್ರಿಯೆ, ಭಾವನೆಗಳು, ಸ್ಪಂದನೆಗಳು ಅದೇ ಕೃತಿಯನ್ನು ನಾಲ್ಕೈದು ದಶಕಗಳ ನಂತರ ಮತ್ತೆ ಓದಿದಾಗ ಬೇರೆಯದೇ ಆಗಿರಬಹುದು. ಆಗಿರಬಹುದೇನು ಆಗಿಯೇ ಆಗುತ್ತದೆ. ಇದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು. ಓದುಗನಲ್ಲಾಗುವ ಪ್ರಬುದ್ಧತೆ, ಕಾಲಬದಲಾವಣೆ, ಪರಿಸರದಲ್ಲಿನ ಬದಲಾವಣೆ ಇತ್ಯಾದಿ.

ಈ ಪ್ರಬಂಧ ಸಂಕಲನದಿಂದಗಡಿಯಾರಮತ್ತುಮುಪ್ಪುಎಂಬ ಎರಡು ಪ್ರಬಂಧಗಳನ್ನು ಆರಿಸಿಕೊಂಡು ಅದರ ಬಗ್ಗೆ ನನ್ನ ಅನಿಸಿಕೆಗಳನ್ನು ಈ ಕೆಳಗೆ ವಿವರಿಸಿರುವೆ:

ಸುಮಾರು ೫೬ ವರ್ಷಗಳ ಹಿಂದೆ  (೧೯೬೨) ರಲ್ಲಿ ಎಚ್ಚೆಸ್ಕೆ ಯವರು ರಚಿಸಿದಗಡಿಯಾರಪ್ರಬಂಧವನ್ನು ಮೊದಲಿಗೆ ನಾನು ಓದಿದ್ದು ೧೯೭೨ ರಲ್ಲಿ, ಸಾರ್ವಜನಿಕ ಗ್ರಂಥಾಲಯದಲ್ಲಿದ್ದ ಒಂದು ಪ್ರಬಂಧ ಸಂಕಲನದಲ್ಲಿ. ಆಗ ಅದು ಕುತೂಹಲಕಾರಿ ಹಾಗೂ ಹಾಸ್ಯಮಿಶ್ರಿತ ಭಾವನೆಗಳನ್ನು ಉಂಟುಮಾಡಿತ್ತು.
ಅದೇ ಪ್ರಬಂಧವನ್ನು ೨೦೦೮ ರಲ್ಲಿ ಪ್ರಕಟವಾದಎಚ್ಚೆಸ್ಕೆ - ಸಮಗ್ರ ಪ್ರಬಂಧಗಳುಕೃತಿಯನ್ನು ಇತ್ತೀಚೆಗೆ ಓದಿದಾಗ ಬೇರೆಯದೇ ಭಾವನೆಗಳು - ಸಮಯಕ್ಕೆ ನೀಡಬೇಕಾದ ಪ್ರಾಧಾನ್ಯತೆ,ಜೀವನಮೇಲೆ ಬೀರುವ ಸಮಯದ ಪ್ರಭಾವ ಇತ್ಯಾದಿ.

ಅದೇನೇ ಇರಲಿ, ಈ ಪ್ರಬಂಧವು ಸಾರ್ವಕಾಲಿಕವಾದುದು ಹಾಗೂ ಇದು ಎಲ್ಲ ವರ್ಗದ ಜನರಿಗೂ ಅನ್ವಯಿಸುವಂಥದ್ದು.

ಮನೆಯಲ್ಲಿರುವ ವಿವಿಧ ರೀತಿಯ ಗಡಿಯಾರಗಳು, ಕಿಸೆಯೊಳಗಿನ ಗಡಿಯಾರ, ಮುಂಗೈಯಲ್ಲಿ ಕಟ್ಟಿಕೊಂಡಿರುವ ಗಡಿಯಾರ, ಅಂಗಡಿಯಲ್ಲಿ ನೇತುಹಾಕಿರುವ ಗಡಿಯಾರ, ಗೋಪುರದಲ್ಲಿ ಸ್ಥಾಪಿಸಿರುವ ಗಡಿಯಾರ, ಹೋಟೆಲಿನಲ್ಲಿರುವ ಗಡಿಯಾರ, ಕಛೇರಿಯಲ್ಲಿನ ಗಡಿಯಾರ, ಗಡಿಯಾರದ ಅಂಗಡಿಯೊಳಗೆ ನೇತು ಹಾಕಿರುವ ಅನೇಕ ಗಡಿಯಾರಗಳು, ಹೀಗೆ ಅನೇಕ ರೀತಿಯ ಗಡಿಯಾರಗಳು ಹಾಗೂ ಅವುಗಳ ವೈಶಿಷ್ಟ್ಯತೆ, ಅವುಗಳು ನೋಡುಗರ ಮೇಲೆ ಬೀರುವ ಪ್ರಭಾವ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಅವುಗಳ ವರ್ತನೆಗಳು ಇತ್ಯಾದಿ ಪ್ರಬಂಧದಲ್ಲಿ ಬಂದು ಓದುಗನ ಕುತೂಹಲವನ್ನು ಹಿಡಿದಿಟ್ಟುಕೊಳ್ಳುತ್ತದೆ.
ಗಡಿಯಾರ ತೋರಿಸುವ ಸಮಯವು ಹಿಂದೋ ಅಥವಾ ಮುಂದೋ ಆಗಿದ್ದಲ್ಲಿ ಅದನ್ನು ಯಾವ ರೀತಿ ನಾವು ಸ್ವೀಕರಿಸಬೇಕು ಹಾಗೂ ಆ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆ ಹೇಗಿರಬೇಕು, ಇವೆಲ್ಲ ವಿಷಯಗಳೂ ಪ್ರಬಂಧದಲ್ಲಿ ಬಂದು ನಮ್ಮನ್ನು ಅಚ್ಚರಿಗೊಳಿಸುತ್ತದೆ.

ಮುಂದುವರೆದು ಎಚ್ಚೆಸ್ಕೆಯವರು
ಗಡಿಯಾರವು ನಿರ್ಜೀವವಲ್ಲ, ಅದಕ್ಕೂ ರಾಗದ್ವೇಷಗಳುಂಟೆ? ಅದೂ ಕೂಡಾ ಮನುಷ್ಯರಂತೆ ಪ್ರೀತಿಸುವುದೆ? ಪ್ರೀತಿಸಿದ ವ್ಯಕ್ತಿ ದೊರಕದಿದ್ದಾಗ ಅದೂ ಕೂಡಾ ಒಂಟಿಯಾಗಿ ಕೊರಗುವುದುಂಟೆ ? ಅವರ ಮನೆಯ ಗಡಿಯಾರಕ್ಕೂ ಇಂಥ ಅನುಭವಗಳು ಒದಗಿತ್ತೇ ? ಅಥವಾ ಅದು ಇವೆಲ್ಲವನ್ನೂ ಮೀರಿ ನಿಂತಿದೆಯೇ ?” ಹೀಗೆ ನಾನಾ ರೀತಿ ಯೋಚಿಸುತ್ತಾರೆ.

ಹೀಗೆಗಡಿಯಾರಪ್ರಬಂಧವು ಎಲ್ಲ ಕಾಲಕ್ಕೂ ಓದಿಸಿಕೊಂಡು ಹೋಗುವ ಹಾಗೂ ಕಾಲ ಬದಲಾದಂತೆ ಓದುಗನ ಮೇಲೆ ವಿವಿಧ ರೀತಿಯ ಪ್ರಭಾವವನ್ನು ಬೀರುತ್ತಾ ಸಾರ್ವಕಾಲಿಕ ಪ್ರಬಂಧವಾಗಿರುವುದು.

1962 ರಲ್ಲಿ ಎಚ್ಚೆಸ್ಕೆಯವರು ರಚಿಸಿದಮುಪ್ಪು  ಲಲಿತ ಪ್ರಬಂಧವು ಅತ್ಯಂತ ಪ್ರಭಾವಕಾರಿಯಾದದ್ದು. ಎಲ್ಲ ವಯಸ್ಸಿನ ಓದುಗರನ್ನೂ ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಲೇಖನ. ಮುಪ್ಪಿನ ವಯಸ್ಸಿನವರಿಗೆ ಅದನ್ನು ಶಾರೀರಿಕವಾಗಿ ಹಾಗೂ ಬಹುಮಟ್ಟಿಗೆ ಮಾನಸಿಕವಾಗಿ ಹೇಗೆ ನಿಭಾಯಿಸಿಕೊಂಡು ಹೋಗುವುದು ಎಂಬುವುದಕ್ಕೆ ಮಾರ್ಗದರ್ಶನವಾದರೆ, ಮಧ್ಯವಯಸ್ಸಿನ ಹಾಗೂ ಯುವಕರಿಗೂ ಇದು ತಾವು ಆ ವಯಸ್ಸಿನಲ್ಲಿ ಹೇಗೆ ಸಂದರ್ಭಗಳನ್ನು ಎದುರಿಸುವುದು ಹಾಗೂ ತಮ್ಮ ಸುತ್ತ ಮುತ್ತ ಇರುವ ಇಳಿವಯಸ್ಸಿನ ಸ್ನೇಹಿತರು, ಮಾತಾ-ಪಿತೃಗಳು ಹಾಗೂ ಇತರ ಬಂಧುಗಳನ್ನು ಯಾವರೀತಿ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡುತ್ತದೆ.

ಶೈಶವ, ಬಾಲ್ಯ, ಯೌವನ, ನಂತರ ಮುಪ್ಪು, ಆಮೇಲೆ? …. ಸಾ----ವು! ಇದು ಮುದುಕರ ಎದುರಿಗೇ ಯಾವಾಗಲೂ ನಿಂತು ಕೆಕ್ಕರಿಸಿಕೊಂಡು ನೋಡುತ್ತಿರುತ್ತದೆ. ಯಾವಾಗ ಬಾಗಿಲಿನ ಸಂದಿನಿಂದ ನುಸುಳೀತೋ ಯಾರಿಗೆ ಗೊತ್ತು? ಇದಕ್ಕೆ Qದೈವಭಕ್ತಿಯನ್ನು ಇಮ್ಮಡಿಸಲು ಎಚ್ಚೆಸ್ಕೆಯವರು ಒಂದು ಪದ್ಯವನ್ನು ಉದ್ಧರಿಸುವರು -
ತಾಸು ಬಾರಿಸುತಿದೆ ಕೇಳಿ,
ಡಣ್ ಢಣ್ ಢಣಾ ಎಂದು
ತಾಸು ಬಾರಿಸುತಿದೆ ಕೇಳಿ”.

ಹೊತ್ತಾರೆ ಎದ್ದು, ಅಗ್ಗವಣಿ ಪತ್ರೆಯತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.”

ಅಂಜಿಕೆಯಿಂದಾಗಿ ಮಾಡುವ ಪೂಜೆ ಪುನಸ್ಕಾರಗಳು ಕೇವಲ ಆತ್ಮವಂಚನೆ ಎನ್ನುತ್ತಾರೆ ಎಚ್ಚೆಸ್ಕೆಯವರು. ಇದು ಎಷ್ಟು ಸತ್ಯವಾದ ಮಾತು ಅಲ್ಲವೆ?

ಇದೇ ಪ್ರಬಂಧದ ಮತ್ತೊಂದು ಕಡೆಯಲ್ಲಿ ಎಚ್ಚೆಸ್ಕೆಯವರು ಬಹು ಮಾರ್ಮಿಕವಾಗಿ :  ಯುವಕನ ಕಣ್ಣು ಮುಂದೆ - ಸರ್ಚ್ ಲೈಟು, ಮುದುಕನಿಗೆ ಹಿಂದೆ. ಮುಂದೆ ಮಬ್ಬು.”
ಮುಂದೆಸೆಯ ತೆರೆಯೆತ್ತಿ ನೋಡಲಳವಲ್ಲ”, ಅವನ ಜೊತೆಗಾರರೆಲ್ಲಾ ಒಬ್ಬೊಬ್ಬರೇ ಕಳಚಿಕೊಳ್ಳುತ್ತಿದ್ದಾರೆ. ನಡಿಗೆ ಸಾಗುತ್ತಿದೆ. ಒಬ್ಬನೇ, ತಾನೊಬ್ಬನೇ, ಎಲ್ಲಿಯವರೆಗೆ !  ಎಷ್ಟು ಮಾರ್ಮಿಕವಾದ ಸತ್ಯ !
ಕೊನೆಯಲ್ಲಿ ಎಚ್ಚೆಸ್ಕೆಯವರು ಮುಪ್ಪಿನ ಹಂತದ ಪ್ರಬಂಧವನ್ನು ಈ ರೀತಿಯಾಗಿ ಮುಕ್ತಾಯಗೊಳಿಸುತ್ತಾರೆ.

ಇಲ್ಲಿಯ ಎಲ್ಲ ಪ್ರಬಂಧಗಳೂ ಒಂದೇ ಮಟ್ಟದ್ದಲ್ಲವಾದರೂ ಅವುಗಳಲ್ಲಿ ಪ್ರಾಮಾಣಿಕತೆ, ವಿಷಯವ್ಯಾಪ್ತಿ, ಸತ್ಯನಿಷ್ಠೆ ಹಾಗೂ ಲೋಕಧರ್ಮ ಶ್ರದ್ಧೆಗಳು ಓದುಗರನ್ನು ಬೆರಗುಗೊಳಿಸುತ್ತದೆ.

ಕನ್ನಡ ಶೈಲಿಯ ಇತಿಹಾಸಕ್ಕೆ ಎಚ್ಚೆಸ್ಕೆಯವರ ಕೊಡುಗೆ ಅನನ್ಯವಾದದ್ದು. ಒಟ್ಟಿನಲ್ಲಿ ಹೇಳಬೇಕೆಂದರೆ, ಅವರ ಕೃತಿಗಳು ದ್ರಾಕ್ಷಾಪಾಕ. ಮುರಾರಿಯ ಕೃಪೆಗೆ ಪಾತ್ರರಾದ
ಡಾ.ಎಚ್ಚೆಸ್ಕೆಯವರ ಸಾಹಿತ್ಯ ಸಾಹಸಕ್ಕೆ ಹಾಗೂ ದೈತ್ಯಶಕ್ತಿಗೆ ನಮ್ಮೆಲ್ಲರ ನಮನಗಳು.

                 




No comments:

Post a Comment