Thursday, March 7, 2019

ಮುಪ್ಪು ಎಚ್ಚೆಸ್ಕೆಯವರ ಪ್ರಬಂಧ ಒಂದು ಇಣುಕು ನೋಟ


ಮುಪ್ಪು
ಎಚ್ಚೆಸ್ಕೆಯವರ ಪ್ರಬಂಧ
ಒಂದು ಇಣುಕು ನೋಟ

1962 ರಲ್ಲಿ ಎಚ್ಚೆಸ್ಕೆಯವರು ರಚಿಸಿದ ಈ ಲಲಿತ ಪ್ರಬಂಧವು ಅತ್ಯಂತ ಪ್ರಭಾವಕಾರಿಯಾದದ್ದು. ಎಲ್ಲ ವಯಸ್ಸಿನ ಓದುಗರನ್ನೂ ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಲೇಖನ. ಮುಪ್ಪಿನ ವಯಸ್ಸಿನವರಿಗೆ ಅದನ್ನು ಶಾರೀರಿಕವಾಗಿ ಹಾಗೂ ಬಹುಮಟ್ಟಿಗೆ ಮಾನಸಿಕವಾಗಿ ಹೇಗೆ ನಿಭಾಯಿಸಿಕೊಂಡು ಹೋಗುವುದು ಎಂಬುವುದಕ್ಕೆ ಮಾರ್ಗದರ್ಶನವಾದರೆ, ಮಧ್ಯವಯಸ್ಸಿನ ಹಾಗೂ ಯುವಕರಿಗೂ ಇದು ತಾವು ಆ ವಯಸ್ಸಿನಲ್ಲಿ ಹೇಗೆ ಸಂದರ್ಭಗಳನ್ನು ಎದುರಿಸುವುದು ಹಾಗೂ ತಮ್ಮ ಸುತ್ತ ಮುತ್ತ ಇರುವ ಇಳಿವಯಸ್ಸಿನ ಸ್ನೇಹಿತರು, ಮಾತಾ-ಪಿತೃಗಳು ಹಾಗೂ ಇತರ ಬಂಧುಗಳನ್ನು ಯಾವರೀತಿ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡುತ್ತದೆ.

ಲೇಖನವುಮುಪ್ಪು ಯೌವನದ ಬೆದರುಗೊಂಬೆಎಂಬ ಆಂಗ್ಲಕವಿಯ ಹೇಳಿಕೆಯಿಂದ ಪ್ರಾರಂಭವಾಗಿ ಹೇಗೆ ಯೌವನವು ಮುಪ್ಪನ್ನು ಕಂಡು ಬೆಚ್ಚಿಬೀಳುವುದು ಎಂಬುದನ್ನು ವರ್ಣಿಸಲಾಗಿದೆ. ಏಕೆಂದರೆ ಮುಪ್ಪು ಯುವಕರಿಗೆರೂಪ ಲಾವಣ್ಯ ಉತ್ಸಾಹಗಳೆಲ್ಲಾ ಇಲ್ಲಿಗೇ! ಕೊನೆಗಿಲ್ಲಿಗೇ!” ಎಂದು ತನ್ನ ಹಿಂಬದಿಯಲ್ಲಿ ನಿಂತ ಸಾವಿನ ಕಡೆ ಕೈ ತೋರಿ ಅಣಕಿಸುತ್ತದೆ.

ಮುಂದುವರೆದು ಲೇಖನವು ಮುಪ್ಪಿನ ಹಂತದಲ್ಲಿರುವವರ ಬಗ್ಗೆ ಯೌವನಕ್ಕೆ ಹೇಗೆ ತಾತ್ಸಾರವುಂಟಾಗುವುದು ಎಂಬುದನ್ನು ವಿವರವಾಗಿ ತಿಳಿಸುತ್ತದೆ. ಹಾಗೆ ಮುದುಕರೂ ಸಹ ಮುಪ್ಪನ್ನು ಅತಿ ವಿರಳವಾಗಿ ಸ್ವಾಗತಿಸುವರು ಅಥವಾ ಅನೇಕ ಮಂದಿ ಇದು ಅನಿವಾರ್ಯವಾದ ಜೀವನದ ಘಟ್ಟವೆಂದು ಬಲವಂತದ ಸಮಾಧಾನವನ್ನು ತಳೆಯುವರು. ಇದು ಒಂದು ರೀತಿಯ ನಿರಾಶಾದಾಯಕ ಹಾಗೂ ಐದು ದಶಕಗಳ ಹಿಂದಿನ ಚಿತ್ರವಿರಬಹುದೆಂದು ನನ್ನ ಅನಿಸಿಕೆ. ಏಕೆಂದರೆ ಅನೇಕ ಮುಪ್ಪಿನ ಹಂತದಲ್ಲಿರುವ ವ್ಯಕ್ತಿಗಳು ಆ ಹಂತವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಅದನ್ನು ಧೈರ್ಯವಾಗಿ ಎದುರಿಸಿ, ಸಮಾಜದೊಂದಿಗೆ ಬೆರೆತು ತಮ್ಮ ಅನುಭವಗಳನ್ನು ಯುವಕರಿಗೆ ವಿವರಿಸಿ ಅವರಿಗೆ ಮಾರ್ಗದರ್ಶಿಗಳಾಗಿರುವರು. ಇಂಥಹ ಅನೇಕ ಹಿರಿಯರನ್ನು ನಾವು ಈಗ ಕಾಣಬಹುದು. 

ಏನೇ ಇರಲಿ ಮತ್ತೆ ಪ್ರಬಂಧದ ಕಡೆ ಕಣ್ಣು ಹಾಯಿಸಿದಾಗ ನಮಗೆ ಹಲವಾರು ಅತ್ಯಂತ ಕುತೂಹಲಕರವಾದ ವಿಷಯಗಳು ಕಂಡುಬರುವುದು.

ಮೊದಲಿಗೆ ಪೌರಾಣಿಕ ಘಟನೆಯೊಂದನ್ನು ಎಚ್ಚೆಸ್ಕೆಯವರು ದೀರ್ಘವಾಗಿ ವಿವರಿಸಿ ಹೇಗೆಸತ್ಯ - ಬೆಂಕಿಯನ್ನು ತುಪ್ಪದಿಂದ ಆರಿಸುವುದು ಅಸಾಧ್ಯವೋ ಹಾಗೆ ಕಾಮನೆಗಳನ್ನು ಭೋಗದಿಂದ ಅಡಗಿಸುವುದು ಸಾಧ್ಯವಿಲ್ಲಎಂಬ ಸತ್ಯವು ಮನವರಿಕೆಯಾದೊಡನೆ ಚಕ್ರವರ್ತಿ ಯಯಾತಿಯು ತನ್ನ ಯೌವನವನ್ನು ತನ್ನ ಮಗನಿಗೆ ಮರಳಿ ಕೊಟ್ಟು ಮುಪ್ಪನ್ನು ಸಂತೋಷದಿಂದ ಅಪ್ಪಿಕೊಂಡ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಇದರಿಂದ ನಮಗೆ ಅರಿಯುವ ಸತ್ಯವೆಂದರೆ ಮುಪ್ಪು ಮಾನವ ಜೀವಿಗೆ ಅನಿವಾರ್ಯ ಎಂಬುದು.

ಶೈಶವ, ಬಾಲ್ಯ, ಯೌವನ, ನಂತರ ಮುಪ್ಪು, ಆಮೇಲೆ? …. ಸಾ----ವು! ಇದು ಮುದುಕರ ಎದುರಿಗೇ ಯಾವಾಗಲೂ ನಿಂತು ಕೆಕ್ಕರಿಸಿಕೊಂಡು ನೋಡುತ್ತಿರುತ್ತದೆ. ಯಾವಾಗ ಬಾಗಿಲಿನ ಸಂದಿನಿಂದ ನುಸುಳೀತೋ ಯಾರಿಗೆ ಗೊತ್ತು? ಇದಕ್ಕೆ ದೈವಭಕ್ತಿಯನ್ನು ಇಮ್ಮಡಿಸಲು ಎಚ್ಚೆಸ್ಕೆಯವರು ಒಂದು ಪದ್ಯವನ್ನು ಉದ್ಧರಿಸುವರು -
ತಾಸು ಬಾರಿಸುತಿದೆ ಕೇಳಿ,
ಡಣ್ ಢಣ್ ಢಣಾ ಎಂದು
ತಾಸು ಬಾರಿಸುತಿದೆ ಕೇಳಿ”.

ಹೊತ್ತಾರೆ ಎದ್ದು, ಅಗ್ಗವಣಿ ಪತ್ರೆಯತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.”

ಅಂಜಿಕೆಯಿಂದಾಗಿ ಮಾಡುವ ಪೂಜೆ ಪುನಸ್ಕಾರಗಳು ಕೇವಲ ಆತ್ಮವಂಚನೆ ಎನ್ನುತ್ತಾರೆ ಎಚ್ಚೆಸ್ಕೆಯವರು. ಇದು ಎಷ್ಟು ಸತ್ಯವಾದ ಮಾತು ಅಲ್ಲವೆ?

ಮತ್ತೊಂದು ಕುತೂಹಲವಾದ ಸತ್ಯವೆಂದರೆ - ಸತತವಾಗಿ ಕಾಡುವ ಸಾವಿನ ಕಣ್ಣಾಮುಚ್ಚಾಲೆಯು (ಅಂದರೆ ಆಗಾಗ್ಗೆ ಆಸ್ಪತ್ರೆ ಭೇಟಿ) ಮುದುಕನನ್ನು ಬದುಕಿನೆಡೆಗೆ ಹೇಗೆ ಹೆಚ್ಚಾಗಿ ಅಂಟಿಕೊಳ್ಳುವಂತೆ ಮಾಡುತ್ತದೆ ಎಂಬುದನ್ನು ಎಚ್ಚೆಸ್ಕೆಯವರು ಮಾರ್ಮಿಕವಾಗಿ ಬಿತ್ತರಿಸಿದ್ದಾರೆ. ಉದಾಹರಣೆಗೆ - ಮರದ ಮೇಲಿಂದ ಬೀಳುವ ಹೆದರಿಕೆಯುಳ್ಳವನು ರೆಂಬೆಯನ್ನು ಬಿಗಿಯಾಗಿ ಅಪ್ಪುವಂತೆ; ಕೊನೆಗೆ ರೆಂಬೆಯೇ ಮುರಿದುಬಿದ್ದರೆ ! ಇದು ಕೇವಲ ಸೋಲುವ ಆಟದಲ್ಲಿ ಗೆಲ್ಲುವ ಭ್ರಮೆ ಇಟ್ಟುಕೊಂಡಂತೆ.

ಸತ್ಯವನ್ನರಿಯದ ಜನರು ಹೇಗೆ ಮೊಂಡುಹಿಡಿಯುತ್ತಾರೆ ಎಂಬುದನ್ನು ಬಹು ಮಾರ್ಮಿಕವಾಗಿ ಎಚ್ಚೆಸ್ಕೆಯವರು ವಿವರಿಸಿದ್ದಾರೆಂದರೆ ಅದು ಅನೇಕ ವೇಳೆ ಸತ್ಯವೇ ಹಾಗೂ ಅದು ನಮ್ಮ ಸುತ್ತ ಮುತ್ತಲಿನಲ್ಲೇ ನಡೆಯುತ್ತಿರುವುದನ್ನು ನೆನಪಿಸುತ್ತದೆ.

ಮತ್ತೊಂದು ಕಡೆಯಲ್ಲಿ ಎಚ್ಚೆಸ್ಕೆಯವರು ಬಹು ಮಾರ್ಮಿಕವಾಗಿ :  ಯುವಕನ ಕಣ್ಣು ಮುಂದೆ - ಸರ್ಚ್ ಲೈಟು, ಮುದುಕನಿಗೆ ಹಿಂದೆ. ಮುಂದೆ ಮಬ್ಬು.”
ಮುಂದೆಸೆಯ ತೆರೆಯೆತ್ತಿ ನೋಡಲಳವಲ್ಲ”, ಅವನ ಜೊತೆಗಾರರೆಲ್ಲಾ ಒಬ್ಬೊಬ್ಬರೇ ಕಳಚಿಕೊಳ್ಳುತ್ತಿದ್ದಾರೆ. ನಡಿಗೆ ಸಾಗುತ್ತಿದೆ. ಒಬ್ಬನೇ, ತಾನೊಬ್ಬನೇ, ಎಲ್ಲಿಯವರೆಗೆ !  ಎಷ್ಟು ಮಾರ್ಮಿಕವಾದ ಸತ್ಯ !
ಕೊನೆಯಲ್ಲಿ ಎಚ್ಚೆಸ್ಕೆಯವರು ಮುಪ್ಪಿನ ಹಂತದ ಪ್ರಬಂಧವನ್ನು ಈ ರೀತಿಯಾಗಿ ಮುಕ್ತಾಯಗೊಳಿಸುತ್ತಾರೆ:-

"ಜೀವನವೆಂಬುದು ದೇವರು ಮನುಷ್ಯನಿಗೆ ವರವಾಗಿ ಕೊಟ್ಟ ಪನ್ನೀರು ದಾನಿ, ಪೌಡರಿನ ಡಬ್ಬ. ಅದರಿಂದ ಪನ್ನೀರನ್ನೆರಚಬಹುದು, ಪೌಡರನ್ನು ಉದುರಿಸಬಹುದು. ಈ ಪನ್ನೀರು, ಪೌಡರಿನ ವಿತರಣೆ ಹೇಗಾಯಿತೆಂಬುದು, ಸುಗಂಧ ಸೌಂದರ್ಯ ಹೇಗೆ ಪಸರಿಸಿದುವೆಂಬುದು, ಸುತ್ತಣ ಗಾಳಿಯ ಯಾವ ಯಾವ ವಸ್ತು ಇದರೊಡನೆ ಸೇರಿ ಏನೇನು ಪರಿಣಾಮವಾಯಿತೆಂಬುದು  ಇದಿಷ್ಟೇ ಮುಖ್ಯ. ಈ ಕೆಲಸವಾದ ಮೇಲೆ ಪನ್ನೀರುದಾನಿಯ ಪ್ರಯೋಜನವಿಲ್ಲ; ಪೌಡರು ಡಬ್ಬಿಯನ್ನು ಬಿಸಾಡಲೇ ಬೇಕು. ಪನ್ನೀರು, ಪೌಡರು, ದಾನಿ ಹಾಗೂ ಡಬ್ಬದೊಳಗೆ ಇನ್ನೂ ಸ್ವಲ್ಪ ಇದ್ದಾಗ ಈ ದಾನಿಯನ್ನು, ಡಬ್ಬವನ್ನು ಜೋರಾಗಿ ಒದರುವುದರಿಂದ ಫಲವಿಲ್ಲ. ಕೊನೆಯ ತೊಟ್ಟು, ಕೊನೆಯ ಚಿಟಿಕೆ ಉದುರುವವರೆಗೂ ಒದರುವುದರಲ್ಲಿ ಅಭ್ಯಂತರವಿಲ್ಲ. ಆದರೆ ಇದಕ್ಕಾಗಿ ಅತಿ ಪ್ರಯಾಸ ಪಡಬೇಕೇಕೆ?"
ಎಂಥಹ ಮಾರ್ಮಿಕ ಹೇಳಿಕೆ ! ಎಚ್ಚರಿಕೆಯಿಂದ ಇದನ್ನು ನಮ್ಮ ಬಾಳಿಗೆ ಅನ್ವಯಿಸಿಕೊಳ್ಳಬೇಕು.

ಮುಂದುವರೆದು -
ಮುಪ್ಪನ್ನು ಬಾಳಿನ ಕಿರೀಟವೆಂದು ವರ್ಣಿಸಲಾಗಿದೆ. ಜೀವನದ ಎಲ್ಲ ಸಾಧನೆಗಳೂ ಪಾರಮ್ಯ, ಸಾರ್ಥಕ್ಯ ಪಡೆಯುವುದು ಈ ವೇಳೆಗೆ. ನೋವು- ನಲಿವು, ಏಳು-ಬೀಳು, ಪ್ರೇಮ-ದ್ವೇಷ, ಚಿಂತೆ, ಮಾತ್ಸರ್ಯಗಳ ಚಕ್ರಬಂಧಸ್ಪರ್ಧೆಯಲ್ಲಿ ಭಾಗವಹಿಸಿ ಆದಮೇಲೆ ಉದ್ಭವಿಸಬೇಕಾದ್ದು ಶಾಂತಿ. ಹಲವು ನದಿಗಳು ಸೇರುವ ಸಮುದ್ರದ ಶಾಂತಿ.
ಚೆನ್ನಾಗಿ ಬಾಳಿ, ಚೆನ್ನಾಗಿ ಪ್ರೀತಿಸಿ, ಜೀವನ ಮುಗಿದಾಗ ತೃಪ್ತಿಯ ಮಂದಹಾಸ ಬೀರುವ ಮುಪ್ಪಿನ ಚೆಲುವೂ ಚೆಲುವೇ. ಇಂಥಹ ಚೆಲುವನ್ನು ಪಡೆದ ಅನೇಕರನ್ನು ಪ್ರಪಂಚದಾದ್ಯಂತ ನಾವು ಕಾಣಬಹುದು. ಅವರಂತೆ ನಾವೂ ಆಗೋಣವೇ? ಯಾಕಾಗಬಾರದು.

ಇದಕ್ಕೆ ಬೇಕಾದದ್ದು -

ಸದಾ ಸಕಾರಾತ್ಮಕ ಚಿಂತನೆ
ಪ್ರಕೃತಿಯೊಂದಿಗೆ ಹೆಚ್ಚು ಹೆಚ್ಚು ಸಹಚರ್ಯ
ಸಮಾಜದೊಡನೆ ಹೆಚ್ಚು ಹೆಚ್ಚು ಬೆರೆಯುವುದು, ಇತ್ಯಾದಿ.

ಈ ವಿಷಯದಲ್ಲಿ ನಿಮ್ಮಲ್ಲೂ ಕೆಲವು ಚಿಂತನೆಗಳು ಉದ್ಭವಿಸಬಹುದಲ್ಲವೇ ? ಅದನ್ನು ನಿಮ್ಮ ಅಭಿಪ್ರಾಯ ಮೂಲಕ ಹಂಚಿಕೊಳ್ಳಬಹುದಲ್ಲವೇ. ಬನ್ನಿ, ಹೆಚ್ಚು ಹೆಚ್ಚು ಹೊರಮುಖಿಗಳಾಗೋಣ ಹಾಗೂ ನಮ್ಮ ಇಳಿವಯಸ್ಸಿನ ಸಮಯವನ್ನು ಸಾರ್ಥಕಗೊಳಿಸೋಣ

**********






No comments:

Post a Comment